ಜಿಲ್ಲೆ

ವಿಭಜನೆಯಿಂದ ಕನ್ನಡಿಗರ ಹಿತಕ್ಕೆ ಮಾರಕ: ಟಿ.ಎ.ನಾರಾಯಣಗೌಡ ಹೇಳಿಕೆ

ಬೆಂಗಳೂರು: ರಾಜಧಾನಿ ಬೆಂಗಳೂರು ಬೃಹತ್ತಾಗಿ ಬೆಳವಣಿಗೆ ಹೊಂದುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯನ್ನು ವಿಭಜನೆ ಮಾಡುವ ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರಬಹುದು. ಆದರೆ, ನಗರದ ಆಡಳಿತ ನಿರ್ವಹಣೆ ದೃಷ್ಟಿಯಿಂದ ವಿಭಜನೆಯೊಂದೇ ಪರಿಹಾರವಲ್ಲ. ಆಡಳಿತ ವಿಕೇಂದ್ರೀಕರಣಕ್ಕೆ ಇತರ ದಾರಿಗಳೂ ಉಂಟು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.

ಮುಖ್ಯವಾಗಿ ನಮ್ಮ ಮಹಾನಗರವು ವಲಸಿಗರಿಂದ ತುಂಬಿಹೋಗುತ್ತಿದೆ. ಇದರಿಂದ ನಗರದ ಭೌಗೋಳಿಕತೆ, ಸಾಮಾಜಿಕ, ಸಾಂಸ್ಕೃತಿಕ ಸ್ವರೂಪ ಬದಲಾಗುತ್ತಿದೆ. ಮೂಲನಿವಾಸಿಗಳಾದ ಕನ್ನಡಿಗರು ಅತಂತ್ರರಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಅದರಲ್ಲೂ ನಗರದ ಸ್ವಾಸ್ಥ್ಯ, ಸಾಮರಸ್ಯಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ಈ ಅಂಶಗಳನ್ನು ವಿಮರ್ಶಿಸಿಸದೆ 5 ಪಾಲಿಕೆಗಳನ್ನಾಗಿ ರಚಿಸಿದರೆ ಕನ್ನಡಿಗರು ಎಲ್ಲಿಗೆ ಹೋಗಬೇಕು? ಬೆಳಗಾವಿ ಮಹಾನಗರ ಪಾಲಿಕೆ ಇತಿಹಾಸ ನಮ್ಮ ಎದುರಿಗೆ ಇರುವಾಗ ಬೆಂಗಳೂರಿಗೆ ಇಂಥ ಪಾಲಿಕೆಗಳು ಬೇಕೆ? ಇದರ ಬದಲು ಬಿಬಿಎಂಪಿಯ ಎಂಟೂ ವಲಯಗಳಿಗೆ ಇನ್ನಷ್ಟು ಆರ್ಥಿಕ ಶಕ್ತಿ ತುಂಬಿ ಸ್ವಾಯತ್ತತೆ ನೀಡಿ ಮೂಲಸೌಕರ್ಯವನ್ನು ಹೆಚ್ಚಿಸಿದಲ್ಲಿ ಆಡಳಿತ ವಿಕೇಂದ್ರೀಕರಣ ಉದ್ದೇಶ ಈಡೇರುತ್ತದೆ. ಇಂತಹ ವ್ಯವಸ್ಥೆಯನ್ನು ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಳವಡಿಸಿಕೊಂಡು ಯಶಸ್ವಿಯಾಗಿದೆ. ಅಲ್ಲಿ ಕೇಳಿಬಾರದ ವಿಭಜನೆ ಕೂಗು ಬೆಂಗಳೂರಿನಲ್ಲಿ ಏಕೆ ಮೂಡಿದೆ. ಬಿಬಿಎಂಪಿ ವಿಭಜನೆಯು ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿರುವುದರಿಂದ ಸರ್ಕಾರ ಈ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಟಿ.ಎ.ನಾರಾಯಣಗೌಡ ಒತ್ತಾಯಿಸಿದ್ದಾರೆ.