ಬೀದರ್: ಬರದಿಂದಾಗಿ ಬೆಳೆ ಹಾನಿಗೊಳಗಾದ ಜಿಲ್ಲೆಯ ರೈತರಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಹೆಕ್ಟೇರ್‍ಗೆ ರೂ. 35 ಸಾವಿರ ಪರಿಹಾರ ಒದಗಿಸಬೇಕು ಎಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಆಗ್ರಹಿಸಿದೆ.
ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಹಾಗೂ ರಾಜ್ಯ ನಿರ್ದೇಶಕ ವಿಶ್ವನಾಥ ಪಾಟೀಲ ಮಾಡಗೋಳ್ ಅವರು ಬೆಂಗಳೂರಿನಲ್ಲಿ ಗುರುವಾರ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದ್ದಾರೆ.
ಸಣ್ಣ, ಅತಿ ಸಣ್ಣ ರೈತರು ಸೇರಿದಂತೆ ಎಲ್ಲ ರೈತರ ರೂ. 2 ಲಕ್ಷದ ವರೆಗಿನ ಸಾಲ ಮನ್ನಾ ಮಾಡಬೇಕು. ಹಿಂಗಾರು ಹಂಗಾಮಿಗೆ ಉಚಿತ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ವಿತರಿಸಬೇಕು ಎಂದು ಆಗ್ರಹಿಸಿದರು.
ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ಇಲ್ಲವೇ ಯಾರಿಗಾದರೂ ಲೀಸ್‍ಗೆ ಕೊಟ್ಟು ಬರುವ ವರ್ಷದಿಂದ ಆರಂಭಿಸಬೇಕು ಎಂದು ಬೇಡಿಕೆ ಇಟ್ಟರು.
ಕಾರ್ಖಾನೆಗೆ 25 ಸಾವಿರ ಷೇರುದಾರರು ಇದ್ದಾರೆ. ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಿಂದ ಪಡೆದ ಸಾಲ ಮರು ಪಾವತಿ ಮಾಡದ ಕಾರಣ ಎರಡು ಬಾರಿ ಹರಾಜಿಗೆ ಬಂದಿದೆ. ಹೀಗಾಗಿ ಸರ್ಕಾರ ಮಧ್ಯಸ್ಥಿಕೆ ವಹಿಸಿ, ಬ್ಯಾಂಕ್‍ನ ಬಡ್ಡಿ ಮನ್ನಾ ಮಾಡಿಸಬೇಕು ಎಂದು ಮನವಿ ಮಾಡಿದರು.
ತಮ್ಮ ಮನವಿಗೆ ಕೃಷಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಿದ್ರಾಮಯ್ಯ ಸ್ವಾಮಿ ತಿಳಿಸಿದ್ದಾರೆ.