ಬೀದರ್: ಹೃದಯಾಘಾತದಿಂದ ನಿಧನರಾದ ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್‍ಗೂ ಬೀದರ್‍ಗೂ ನಂಟು ಇತ್ತು. ಬಸವ ಸೇವಾ ಪ್ರತಿಷ್ಠಾನದ ಗುರುಬಸವ ಪುರಸ್ಕಾರ ಸ್ವೀಕರಿಸಲು ಅವರು ಇಲ್ಲಿಗೆ ಬಂದಿದ್ದರು.
ರೈತರ ಹಿತ ರಕ್ಷಣೆಗಾಗಿ 2017 ರ ಫೆಬ್ರುವರಿ 10 ರಂದು ಬೀದರ್‍ನಲ್ಲಿ ನಡೆದಿದ್ದ ವಚನ ವಿಜಯೋತ್ಸವದಲ್ಲಿ ಪ್ರತಿಷ್ಠಾನದ ಅಧ್ಯಕ್ಷೆಯಾಗಿದ್ದ ಲಿಂ. ಅಕ್ಕ ಅನ್ನಪೂರ್ಣತಾಯಿ ಅವರು ಗುರುಬಸವ ಪುರಸ್ಕಾರ ಪ್ರದಾನ ಮಾಡಿದ್ದರು. ಪುರಸ್ಕಾರವು ಪ್ರಶಂಸಾ ಪತ್ರ ಹಾಗೂ ರೂ. 50 ಸಾವಿರ ಗೌರವ ಧನ ಒಳಗೊಂಡಿತ್ತು ಎಂದು ಸಾಹಿತಿ ರಮೇಶ ಮಠಪತಿ ತಿಳಿಸಿದ್ದಾರೆ.
ಅಂದಿನ ದಿನಗಳಲ್ಲಿ ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ಭೀಕರ ಬರಗಾಲ ಉಂಟಾಗಿತ್ತು. ಖರೀದಿಗಾಗಿ ರೂ. 1.5 ಕೋಟಿ ಮೌಲ್ಯದ ಹೊಸ ಕಾರು ಬುಕ್ ಮಾಡಿದ್ದ ನಾನಾ ಪಾಟೇಕರ್ ಅವರು, ರೈತರ ಕಷ್ಟಕ್ಕೆ ಮಮ್ಮಲ ಮರಗಿದರು. ಕಾರು ಬುಕ್ಕಿಂಗ್ ರದ್ದುಪಡಿಸಿ, ಅದೇ ಹಣದಲ್ಲಿ ರೈತರಿಗೆ ತಲಾ ರೂ. 15 ಸಾವಿರ ನೆರವು ನೀಡಿ ಮಾನವೀಯತೆ ಮೆರೆದಿದ್ದರು ಎಂದು ಸ್ಮರಿಸಿದ್ದಾರೆ.
ನೇರ ನಡೆ-ನುಡಿಯ ನಾನಾ ಪಾಟೇಕರ್ ದೇಶ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. ಅವರು ನಟನೆಗಷ್ಟೇ ಸೀಮಿತರಾಗದೆ, ಸಾಮಾಜಿಕ ಕಾರ್ಯಗಳಲ್ಲೂ ಸಕ್ರಿಯರಾಗಿದ್ದರು. ಅವರ ನಿಧನದಿಂದ ಭಾರತೀಯ ಚಿತ್ರರಂಗ ಹಾಗೂ ರೈತ ವಲಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.