ಔರಾದ್​ ತಾಲೂಕಿನ ಚಿಕ್ಲಿ(ಯು) ಸೋಲಾರ್​ ಘಟಕಕ್ಕೆ ಶಾಸಕ ಪ್ರಭು ಚವ್ಹಾಣ್​ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಪ್ರಕಾಶ್​ ಅಲ್ಮಾಜೆ, ರಾಮಶೆಟ್ಟಿ ಪನ್ನಾಳೆ, ಕೇರಬಾ ಪವಾರ್​ ಇತರರಿದ್ದರು 
ಬೀದರ್

ರೈತರಿಗೆ ಅನ್ಯಾಯವಾದರೆ ಸಹಿಸಲ್ಲ

ಔರಾದ್​: ರೈತರ ಮನವಿ ಮೇರೆಗೆ ಶಾಸಕರಾದ ಮಾಜಿ ಸಚಿವ ಪ್ರಭು ಚವ್ಹಾಣ್​ ಮಂಗಳವಾರ ಚಿಕ್ಲಿ (ಯು), ಮುಧೋಳ ಹಾಗೂ ಹಿಪ್ಪಳಗಾಂವ ಗ್ರಾಮಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಸೋಲಾರ್​ ಟಕಗಳ ಸ್ಥಳಗಳಿಗೆ ದಿಢೀರ್​ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಿಕ್ಲಿ(ಯು) ಹಾಗೂ ಮುಧೋಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರು ಘಟಕ ಮುಖ್ಯಸ್ಥರ ವಿರುದ್ಧ ದೂರು ಸಲ್ಲಿಸಿದರು. ಅಹವಾಲು ಆಲಿಸಿದ ಶಾಸಕರು, ಘಟಕಗಳ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡು ರೈತರ ಸಮಸ್ಯೆಗಳನ್ನು ಗಂಭೀರ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅನ್ನದಾತರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ನೆರೆಯ ಮಹಾರಾಷ್ಟ್ರದಲ್ಲಿ ಸೋಲಾರ್​ ಯೋಜನೆಗೆ ಜಮೀನು ನೀಡಿದ ರೈತರಿಗೆ ಎಕರೆಗೆ 50 ಸಾವಿರ ರೂ. ನೀಡಲಾಗುತ್ತಿದೆ. ಆದರೆ ಇಲ್ಲಿ ಕೇವಲ 35 ಸಾವಿರ ರೂ. ನೀಡುತ್ತಿರುವುದು ಸರಿಯೇ? ರೈತರಿಗೆ ಪರಿಹಾರ ನೀಡುವ ವಿಚಾರದಲ್ಲಿ ತಾರತಮ್ಯ ಏಕೆ ಎಂದು ಪ್ರಶ್ನಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸೋಲಾರ್​ ಯೋಜನೆಗಾಗಿ ಜಮೀನು ನೀಡುವ ರೈತರ ಹಿತಾಸಕ್ತಿ ಕಾಪಾಡಿ ನ್ಯಾಯಯುತ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಸೋಲಾರ್​ ಟಕಗಳಲ್ಲಿಯೂ ಬ್ರೋಕರ್​ಗಳ ಹಾವಳಿ ಹೆಚ್ಚಾಗಿದೆ ಎಂದು ಸಾಕಷ್ಟು ದೂರುಗಳು ಬರುತ್ತಿವೆ. ಇಂಥವುಗಳಿಗೆ ಆಸ್ಪದ ಕೊಡಬಾರದು ಎಂದರು.

ಕ್ಷೇತ್ರದ ರೈತರಿಗೆ ಅನುಕೂಲವಾಗಬೇಕು ಹಾಗೂ ಸ್ಥಳಿಯವಾಗಿ ಉದ್ಯೋಗಾವಕಾಶ ಸೃಷ್ಟಿಯಾಗಬೇಕು ಎಂಬ ಉದ್ದೇಶದಿಂದಲೇ ಸೋಲಾರ್​ ಪಾರ್ಕ್​ ಯೋಜನೆಯನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಆದರೆ ಯೋಜನೆಯಿಂದ ರೈತರು ಹಾಗೂ ಸ್ಥಳಿಯ ಜನರಿಗೆ ಅನುಕೂಲವಾಗುತ್ತಿಲ್ಲ ಎಂಬುದು ಗಮನಕ್ಕೆ ಬಂದರೆ ಸುಮ್ಮನೆ ಕೂರುವುದಿಲ್ಲ ಎಂದು ಗುಡುಗಿದರು.

ಸೋಲಾರ್​ ಘಟಕಗಳ ನಿರ್ಮಾಣ ಕಾರ್ಯಕ್ಕೆ ಅಗತ್ಯವಿರುವ ವಿವಿಧ ವಾಹನ ಮತ್ತು ಉಪಕರಣಗಳನ್ನು ಸುತ್ತಮುತ್ತಲಿನ ಗ್ರಾಮಸ್ಥರಿಂದಲೇ ಪಡೆಯಬೇಕು. ಸ್ಥಳಿಯವಾಗಿ ಲಭ್ಯವಿರುವ ಸಂಪನ್ಮೂಲ ಬಳಸುವ ಮೂಲಕ ಉದ್ಯೋಗ ಮತ್ತು ಆದಾಯದ ಅವಕಾಶಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಪ್ರಕಾಶ್​ ಅಲ್ಮಾಜೆ, ಉದಯ ಸೋಲಾಪುರೆ, ಕೇರಬಾ ಪವಾರ್​, ರಾಜು ಶೆಳ್ಕೆ, ಸುಜೀತ್​ ರಾಠೋಡ್​, ಸಂದೀಪ್​ ಪಾಟೀಲ್​, ಸಂಜು ಮುರ್ಕೆ, ಗಜಾನಂದ ವಟಗೆ, ಅಂಕುಶ ವಾಡೀಕರ್​, ರಾಮ ಹಿಪ್ಪಳಗಾಂವ, ಶ್ರೀಮಂತರಾವ ಚವ್ಹಾಣ್​, ಪ್ರೇಮದಾಸ ಸೂರ್ಯವಂಶಿ, ಸೋಪಾನರಾವ, ಪೀರಖಾನ್​ ಪಠಾಣ್​, ಅಮ್ಜದ್​ ಪಠಾಣ್​, ನಾಗನಾಥ ಸ್ವಾಮಿ, ಬಾಬು ಗುರೂಜಿ, ರಮೇಶ ಪವಾರ್​ ಇತರರಿದ್ದರು.