ತೋಳ ದಾಳಿಯಿಂದ ಬೀದರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಔರಾದ್ ತಾಲೂಕಿನ ಜೋಜನಾ ಗ್ರಾಮದ ಲಾಲಮ್ಮ ಕಾಂಬ್ಲೆ ಆರೋಗ್ಯವನ್ನು ಸಚಿವ ಈಶ್ವರ ಖಂಡ್ರೆ ಶನಿವಾರ ವಿಚಾರಿಸಿದರು.  
ಬೀದರ್

ತೋಳಕ್ಕೆ ಹೆದರಿ ಹೊಲಕ್ಕೆ ತೆರಳಲು ಹಿಂದೇಟು

ರಾಜು ಯಮಕನಮರಡಿ
ಔರಾದ್: ಆಲೂರ, ಜೀರ್ಗಾ(ಬಿ), ಜೋಜನಾ, ನಾಗೂರ(ಎಂ) ಗ್ರಾಮಗಳಲ್ಲಿ ಶುಕ್ರವಾರ ನಾಲ್ಕು ಜನರು ಮತ್ತು ಎರಡು ಎಮ್ಮೆ ಮೇಲೆ ತೋಳವೊಂದು ದಾಳಿ ಮಾಡಿ ತೀವ್ರ ಗಾಯಗೊಳಿಸಿದ್ದರಿಂದ ಕೃಷಿಕರು ಹೊಲಗಳಿಗೆ ತೆರಳಲು ಹಿಂಜರಿಯುವಂತಾಗಿದೆ.
ವಾರದ ಹಿಂದೆ ಚಿಂತಾಕಿಯಲ್ಲಿ ರೈತನ ಮೇಲೆ ತೋಳ ದಾಳಿ ಮಾಡಿರುವುದು ಮರೆಯುವ ಮುನ್ನವೇ ಶುಕ್ರವಾರ ಮತ್ತೆ ವಿವಿಧೆಡೆ ತೋಳ ಅಟ್ಟಹಾಸ ಮೆರೆದಿದೆ. ಸಂತಪುರ, ಜೀರ್ಗಾ(ಬಿ), ಜೀರ್ಗಾ(ಕೆ), ಶೆಂಬೆಳ್ಳಿ, ಖಾಶೆಂಪುರ, ಆಲೂರ(ಬಿ), ಬೇಲೂರ(ಎನ್), ನಾಗೂರ(ಎಂ), ಜೋಜನಾ, ಲಿಂಗದಳ್ಳಿ, ಗುಡಪಳ್ಳಿ, ಮೆಡಪಳ್ಳಿ, ಉಜುನಿ, ಚಿಂತಾಕಿ ಇತರ ಗ್ರಾಮಗಳಲ್ಲಿ ಜನ ಆತಂಕದಲ್ಲಿದ್ದಾರೆ.
ನಾಗೂರ(ಎಂ) ಶಿವಾರದಲ್ಲಿ ರಮೇಶ ಧನಗಾರ್ ಮತ್ತು ದೀಪಕ್ ಪಾಟೀಲ್ ಅವರ ಎಮ್ಮೆ ಮೇಲೆ ತೋಳ ದಾಳಿ ಮಾಡಿದ್ದು, ಶನಿವಾರ ವಡಗಾಂವ್ ಪಶು ವೈದ್ಯಾಧಿಕಾರಿ ಡಾ.ಸೂರ್ಯಕಾಂತ ಬಿರಾದಾರ್ ಭೇಟಿ ನೀಡಿ ಎಮ್ಮೆಗಳಿಗೆ ಚಿಕಿತ್ಸೆ ನೀಡಿದ್ದಾರೆ. ಶೀಘ್ರವೇ ತೋಳಗಳನ್ನು ಹಿಡಿದು ರೈತರಲ್ಲಿರುವ ಭಯ ತಪ್ಪಿಸಬೇಕು ಎಂಬುದು ಒಕ್ಕೊರಲ ಒತ್ತಾಯವಾಗಿದೆ.
ತೋಳ ದಾಳಿ ಮಾಡಿದ ಸಂತಪುರ ಹೋಬಳಿಯ ಎಲ್ಲ ಗ್ರಾಮಗಳಲ್ಲಿ ಡಂಗೂರ ಸಾರಿ ಒಬ್ಬರೇ ಗದ್ದೆಗಳಿಗೆ ತೆರಳದಂತೆ ಮತ್ತು ರಾತ್ರಿ ವೇಳೆ ಹೊಲಗಳಲ್ಲಿ ಇರಕೂಡದು ಎಂದು ಜಾಗೃತಿ ಮೂಡಿಸುವಂತೆ ಪಿಡಿಒಗಳಿಗೆ ತಿಳಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.