ಬಸವಕಲ್ಯಾಣ: ಹೊಸ ತಂತ್ರಜ್ಞಾನ ಬಳಸಿ ಕೃಷಿ ಉತ್ಪನ್ನ ಬೆಳೆಸಿ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಹೈದರಾಬಾದ್ನ ಅಂತಾರಾಷ್ಟ್ರೀಯ ಅರೆ, ಒಣ ಪ್ರದೇಶ ಸಂಶೋಧನಾ ಸಂಸ್ಥೆ ಹಿರಿಯ ವಿಜ್ಞಾನಿ ಡಾ.ಜಾಬಾ ಜಗದೀಶ ರೈತರಿಗೆ ಸಲಹೆ ನೀಡಿದರು.
ಹರಳಯ್ಯ ಗವಿಯಲ್ಲಿ ಶರಣ ವಿಜಯೋತ್ಸವ ನಾಡಹಬ್ಬ, ಹುತಾತ್ಮ ದಿನ ನಿಮಿತ್ತ ಗುರುವಾರ ಸಂಜೆ ಏರ್ಪಡಿಸಿದ್ದ ರೈತ ಸಮಾವೇಶದಲ್ಲಿ ಶರಣ ವಿಜ್ಞಾನಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು, ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿದ ತಳಿಗಳನ್ನು ರೈತರು ಬಳಸಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು ಎಂದರು.
ಇಕ್ರಿಸ್ಯಾಟ್ ಎಂಬುದು ಒಣಭೂಮಿ ಕೃಷಿ ಮತ್ತು ಆಹಾರ ವ್ಯವಸ್ಥೆ ಸುಧಾರಿಸಲು ಶ್ರಮಿಸುವ ಲಾಭರಹಿತ ಸಂಸ್ಥೆಯಾಗಿದೆ. ಮಳೆ ಕಡಿಮೆಯಿರುವ ಪ್ರದೇಶಗಳಲ್ಲಿ ಬೆಳೆಗಳ ಇಳುವರಿ ಮತ್ತು ಗುಣಮಟ್ಟ ಹೆಚ್ಚಿಸಲು ಸಂಶೋಧನೆ ನಡೆಸುತ್ತದೆ. ಮಣ್ಣಿನ ಆರೋಗ್ಯ, ಜಲಾನಯನ ಅಭಿವೃದ್ಧಿ ಮತ್ತು ನೀರಿನ ಸಮರ್ಪಕ ಬಳಕೆ ತಂತ್ರಜ್ಞಾನ ರೈತರಿಗೆ ತಿಳಿಹೇಳುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಜಾಗತಿಕ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಬಸವರಾಜ ಬುಳ್ಳಾ ಉದ್ಘಾಟಿಸಿ ಮಾತನಾಡಿ, ಶರಣರಿಗೆ ಕೃಷಿ ಬಗ್ಗೆ ಚಿಂತನೆ, ಅಭಿಮಾನ, ಪೂಜ್ಯಭಾವ ಇದೆ. ಸರ್ಕಾರ ಹೊಲದಲ್ಲಿ ರೈತರಿಗಾಗಿ ಕೃಷಿ ಕುಟಿರ ನಿರ್ಮಿಸಿಕೊಡಬೇಕು ಎಂದು ಕೋರಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ನೇತೃತ್ವ ವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಡಾ.ಮಹೇಶ ಪಾಟೀಲ್ ಮಾತನಾಡಿದರು. ಮಿಲ್ಲೆಟ್ ಮ್ಯಾನ್ ವೀರಶೆಟ್ಟಿ ತೊಗರಿ ತಳಿಗಳ ಕುರಿತು, ಪುನರ್ವೈಭವ ಸಂಸ್ಥೆ ಸಂಸ್ಥಾಪಕ ಆಕಾಶ ಮೊಳಕೇರಿ ಗೋವುಗಳ ಮಹತ್ವ ತಿಳಿಸಿದರು.
ಬೀದರ್ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ರಾಜಶೇಖರ ಬಸನಾಯಕ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಜಮಖಂಡೆ, ಪ್ರಮುಖರಾದ ಡಾ.ಮಲ್ಲಿಕಾರ್ಜುನ ಬುಕ್ಕಾ, ರೇವಣಪ್ಪ ರಾಯವಾಡೆ, ಡಾ.ಶಂಕರಗೌಡ ಪಾಟೀಲ್, ರಾಜಕುಮಾರ ಬಿರಾದಾರ, ಸುಭಾಷ ರಗಟೆ, ಶಂಕರಗೌಡ ಪಾಟೀಲ್, ಜಯಪ್ರಕಾಶ ಸದಾನಂದೆ, ವಿದ್ಯಾವತಿ ಶೇರಿಕಾರ, ರೇವಣಸಿದ್ದ ಯರಬಾಗ, ಸುಜಾತಾ ತೊಗರಖೇಡೆ, ಮಲ್ಲಿಕಾರ್ಜುನ ಉಳ್ಳೆ, ವನಮಾಲಾ ಜೋಕಾರೆ, ರಾಜೇಂದ್ರ ಜೊನ್ನಿಕೇರಿ ಇತರರಿದ್ದರು. ಹಣಮಂತ ಧನಶೆಟ್ಟಿ ಸ್ವಾಗತಿಸಿದರು. ತ್ರಿವೇಣಿ ನಾಗರಾಳೆ ನಿರೂಪಣೆ ಮಾಡಿದರು.