ಬಸವಕಲ್ಯಾಣ: ಹನ್ನೆರಡನೆಯ ಶತಮಾನದ ಬಸವಾದಿ ಶಿವಶರಣರ ಚಳವಳಿಯಲ್ಲಿ ಅಕ್ಕಮಹಾದೇವಿ, ಅಕ್ಕನಾಗಮ್ಮ ಇತರರು ತಮ್ಮ ವಿಚಾರ ಸ್ವಾತಂತ್ರ್ಯ, ಆತ್ಮ ಗೌರವ ಹಾಗೂ ಅಧ್ಯಾತ್ಮ ಸಾಧನೆ ಮೂಲಕ ಮಹಿಳೆಯರ ಸ್ವಾತಂತ್ರ್ಯ ವ್ಯಕ್ತಿತ್ವಕ್ಕೆ ಮಾದರಿಯಾಗಿದ್ದಾರೆ ಎಂದು ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ಹೇಳಿದರು.
ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗದಡಿ ಹರಳಯ್ಯ ಗವಿಯಲ್ಲಿ ಶರಣ ವಿಜಯೋತ್ಸವ ನಾಡಹಬ್ಬ, ಹುತಾತ್ಮ ದಿನಾಚರಣೆಯ ಮೂರನೇ ದಿನ ಮಂಗಳವಾರ ಆಯೋಜಿಸಿದ್ದ ಮಹಾಶಕ್ತಿ ಕೂಟಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಕಾಯಕ ಮತ್ತು ದಾಸೋಹದ ತತ್ವಗಳು ಸಮಾನತೆ, ದುಡಿಮೆ ಗೌರವ ಹಾಗೂ ಸಾಮಾಜಿಕ ನ್ಯಾಯದ ಸಂದೇಶ ಸಾರುತ್ತವೆ ಎಂದರು.
ಮಹಿಳೆಯರಿಗೆ ಪರಮಾತ್ಮನ ಸ್ಥಾನ ನೀಡಿದವರು ಶರಣರು. ಎಲ್ಲರ ಅಂತರಂಗದಲ್ಲಿ ಅರಿವಿನ ರೂಪದಲ್ಲಿ ಪರಮಾತ್ಮನಿದ್ದಾನೆ. ಮಹಿಳೆಯರ ಸಾಮರ್ಥ್ಯಕ್ಕೆ ಅವಕಾಶ ನೀಡಬೇಕು. ವೈಜ್ಞಾನಿಕ ವೈಚಾರಿಕವಾಗಿ ಮಹಿಳೆಯರು ಬೆಳೆಯಬೇಕು. ಅವರ ಸಾಧನೆಗೆ ಗೌರವ ಸಲ್ಲಿಸಬೇಕು. ಇದೇ ನಿಜವಾದ ಮಹಿಳಾ ಸಬಲೀಕರಣ ಎಂದು ನುಡಿದರು.
ಯರಬಾಗ ನೀಲಗಂಗಾ ಆಯುರ್ವೇದ ಮೆಡಿಕಲ್ ಕಾಲೇಜಿನ ಅಧ್ಯೆಕ್ಷ ಡಾ.ಅನಿತಾ ಮಹಾಜನ್ ಉದ್ಘಾಟಿಸಿ ಮಾತನಾಡಿ, ಕಾರ್ಯಕ್ರಮಗಳಿಂದ ಕ್ರಿಯಾಶೀಲತೆ ಹೆಚ್ಚುತ್ತದೆ. ಮಹಿಳೆಯರಿಗೆ ಸಮಾನ ಕ್ಷೇತ್ರಗಳಲ್ಲಿ ಸಮಾನ ಅವಕಾಶ ನೀಡಿದರೆ ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದರು.
ಹಿರಿಯ ಪತ್ರಕರ್ತೆ ಶೋಭಾ ಎಚ್.ಜಿ. ಮಾತನಾಡಿ, ವಚನಗಳು ಪ್ರತಿ ಮನೆಗೂ ತಲುಪಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ವಚನ ಪಸರಿಸಬೇಕು. ಸಂದರ್ಭ ಬಂದಾಗ ದುಷ್ಟಶಕ್ತಿಗಳನ್ನು ಎದುರಿಸಲು ಸಿದ್ಧರಾಗಬೇಕು. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಮಹಿಳೆ ಮನಸ್ಸು ಮಾಡಿದರೆ ಅಸಾಧ್ಯವಾದುದ್ದನ್ನು ಸಾಧಿಸಬಹುದು. ಕುಟುಂಬಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಹೆಣ್ಮಕ್ಕಳ ಮೇಲಿದೆ. ಕೌಟುಂಬಿಕ ನ್ಯಾಯಾಲಯದಿಂದ ದೂರವಿರಬೇಕೆಂದರೆ ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಪ್ರಾಧ್ಯಾಪಕಿ ಡಾ.ಸವಿತಾ ದಂಡೆ ಮಾತನಾಡಿ, ಜಗತ್ತಿನಲ್ಲಿ ಮೊಟ್ಟ ಮೊದಲು ಅನುಭವ ಮಂಟಪದ ಮೂಲ ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದ್ದು ಕಲ್ಯಾಣ. ಅಕ್ಕಮಹಾದೇವಿಯವರು ತಮ್ಮ ಆತ್ಮಸಾಗೆ ಅನುಗುಣ ಬದುಕುವ ಹಕ್ಕನ್ನು ಪ್ರತಿಪಾದಿಸಿದರು. ಶರಣೆಯರು ಜ್ಞಾನ ಮತ್ತು ಅನುಭವದ ಕ್ಷೇತ್ರದಲ್ಲಿ ಪುರುಷರಿಗೆ ಸಮಾನವಾಗಿ ನಿಂತು ಮಹಿಳೆಯರು ಸಮಾಜದ ಪರಿವರ್ತನೆಯ ಶಕ್ತಿಯಾಗಬಲ್ಲರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಡಾ.ಪ್ರಿಯಾಂಕಾ ವರವಟ್ಟೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸ್ತ್ರೀರೋಗ ತಜ್ಞೆ ಡಾ.ಜ್ಯೋತಿಲಕ್ಷ್ಮೀ ಹಂಚಾಟೆ ಧ್ವಜಾರೋಹಣ ನೆರವೇರಿಸಿದರು. ಪೂಜ್ಯ ಸತ್ಯಕ್ಕತಾಯಿ, ಪೂಜ್ಯ ಇಂದುಮತಿ ತಾಯಿ, ನಿವೃತ್ತ ಪ್ರಾಧ್ಯಾಪಕಿ ಡಾ.ಭಾಗಿರಥಿ ಕೊಂಡಾ, ವಿದ್ಯಾವತಿ ಅಷ್ಟೂರೆ, ಮಹಾದೇವಿ ಬಿರಾದಾರ್, ಪ್ರೊ.ಮಲ್ಲಮ್ಮ ಪಾಟೀಲ್, ಬಿ.ಎಂ. ಶಶಿಕಲಾ, ಶಿವಮ್ಮಾ ಹೊಳಕುಂದೆ, ಚಂಪಾವತಿ ಮಹಾಜನ್, ಸಪ್ನಾ ಜಾಧವ್, ರೇಣುಕಾ ಬಿರಾಜಾದಾರ್, ಆಶಾರಾಣಿ ಮಡಿವಾಳ, ಶಶಿಕಲಾ ಸಲಗರೆ, ಜಗದೇವಿ ಸಜ್ಜನಶೆಟ್ಟಿ, ಮಹಾನಂದ ಕಿರುಣಗೆ, ನಾಗಮ್ಮಾ ಕೌಡಾಳೆ, ಸುಮಿತ್ರಾ ಡಾವಣಗಾಂವೆ, ಈರಮ್ಮಾ ಘಾಳೆ, ಡಾ.ಪ್ರಿಯಾಂಕಾ ಮಂಠಾಳೆ, ಶಾಮಾ ರಗಟೆ, ಡಾ.ಪ್ರಿಯಾಂಕಾ ಮಂಠಾಳೆ, ಶಾಮಾ ರಗಟೆ ಇತರರಿದ್ದರು.
ರೇಣುಕಾ ಹೋಗ್ತಾಪುರೆ ಮಹಾಶಕ್ತಿ ಕೂಟಗಳ ಕಾರ್ಯಗಳ ವರದಿ ವಾಚಿಸಿದರು. ರಂಜನಾ ಭೂಶೆಟ್ಟಿ ಮತ್ತು ಅವಿನಾಶ ಭೋಸಗಾ ವಚನ ಸಂಗೀತ ನಡೆಸಿಕೊಟ್ಟರು. ನಿರ್ಮಲಾ ಶಿವಣಕರ್ ಸ್ವಾಗತಿಸಿದರು. ವಿಜಯಲ$್ಮ ಹೂಗಾರ ನಿರೂಪಣೆ ಮಾಡಿದರು.
ಬಸವೇಶ್ವರರು 12ನೇ ಶತಮಾನದಲ್ಲಿ ಕೈಗೊಂಡ ಸಾಮಾಜಿಕ ಚಿಂತನೆ, ವಿಚಾರಗಳು ಇಂದಿನ ಆಧುನಿಕ ನಾಗರಿಕ ಸಮಾಜಕ್ಕೆ ಮಾದರಿ. ಬಸವಣ್ಣನವರು ಜಗತ್ತಿನ ಅತ್ಯಂತ ಶ್ರೇಷ್ಠ ಚಿಂತಕರು.> ಶೋಭಾ ಎಚ್.ಜಿ. ಹಿರಿಯ ಪತ್ರಕರ್ತೆ