ಬಸವಕಲ್ಯಾಣ: ಬಸವ ಧರ್ಮಪೀಠ ಬಸವ ಮಹಾ ಮನೆ ಪರಿಸರದಲ್ಲಿ ಮೂರು ದಿನ ನಡೆದ 25ನೇ ಕಲ್ಯಾಣ ಪರ್ವ ರಜತ ಮಹೋತ್ಸವ ನಿಮಿತ್ತ ಸೋಮವಾರ ನಗರದಲ್ಲಿ ಪುಷ್ಪಾಲಂಕೃತ ಸಾರೋಟಿಯಲ್ಲಿ ವಿಶ್ವಗುರು ಬಸವಣ್ಣನವರ ಪ್ರತಿಮೆ ಹಾಗೂ ವಚನ ಸಾಹಿತ್ಯದ ಭವ್ಯ ಮೆರವಣಿಗೆ ಶರಣ ಸಂಸತಿಯ ವೈಭವದೊಂದಿಗೆ ಜರುಗಿತು.
ನಗರದ ಐತಿಹಾಸಿಕ ಕೋಟೆಯಿಂದ ಮುಖ್ಯರಸ್ತೆಯ ಮಾರ್ಗವಾಗಿ ಬಸವ ಮಹಾಮನೆಯವರೆಗೂ ಅಲಂಕೃತ ವಾಹನದಲ್ಲಿ ಬಸವಣ್ಣನವರ ಪುತ್ಥಳಿ, ಮತ್ತೊಂದು ವಾಹನದಲ್ಲಿ ಪೂಜ್ಯ ಲಿಂ.ಡಾ.ಮಾತೆಮಾಹಾದೇವಿ ಭಾವಚಿತ್ರದ ಮೆರವಣಿಗೆ ಜರುಗಿತು. ಪೂಜ್ಯರು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿ ವಿವಿಧೆಡೆಯಿಂದ ಆಗಮಿಸಿದ ಅಪಾರ ಸಂಖ್ಯೆಯಲ್ಲಿ ಬಸವ ಭಕ್ತರು ಪಾಲ್ಗೊಂಡಿದ್ದರು.
ಕೊರಳಿಗೆ ಸ್ಕಾಪ್, ತಲೆಯ ಮೇಲೆ ಕಲ್ಯಾಣ ಪರ್ವ ಎಂದು ಬರೆದ ಟೊಪ್ಪಿಗೆ ಧರಿಸಿದ ಬಸವ ಭಕ್ತರ ವಚನ ಗಾಯನಕ್ಕೆ ಹೆಜ್ಜೆ ಹಾಕಿದರು. ಒಂಟೆ, ಕುದರೆಗಳೊಂದಿಗೆ ನಡೆದ ಮೆರವಣಿಗೆಯಲ್ಲಿ ಡೊಳ್ಳು, ಝಾಂಝ್ ಸೇರಿ ಇತರ ಕಲಾ ತಂಡದವರಿಂದ ಪ್ರದರ್ಶನ ಗಮನ ಸೆಳೆಯಿತು. ಮೆರವಣಿಗೆಯುದ್ದಕ್ಕೂ ಘೋಷಣೆಗಳು ಮೊಳಗಿದವು.
ಪೂಜ್ಯಗಂಗಾ ಮಾತಾಜಿ ಸಾನ್ನಿಧ್ಯದಲ್ಲಿ ಕೋಟೆ ಎದುರು ಮೆರವಣಿಗೆಗೆ ಸಹಾಯಕ ಆಯುಕ್ತ ಪ್ರಕಾಶ ಕುದರಿ ಚಾಲನೆ ನೀಡಿದರು. ಬಸವ ತತ್ವ ಪ್ರಚಾರ-&ಪ್ರಸಾರದ ಉದ್ದೇಶದಿಂದ ಕಳೆದ ಪ್ರತಿವರ್ಷ ಕಲ್ಯಾಣ ಪರ್ವ ನಡೆಸಿಕೊಂಡು ಬರಲಾಗುತ್ತಿದ್ದು, 25ನೇ ಕಲ್ಯಾಣ ಪರ್ವ ಯಶಸ್ವಿಯಾಗಿದೆ. ಬಸವ ತತ್ವ ಎಲ್ಲೆಡೆ ಪ್ರಚಾರ-&ಪ್ರಸಾರವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಪವಿತ್ರ ಪರುಷಕಟ್ಟೆಯಲ್ಲಿ ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಪೂಜ್ಯ ಡಾ.ಮಾತೆ ಗಂಗಾದೇವಿ ವಿಶೇಷ ಪೂಜೆ ಸಲ್ಲಿಸಿದರು. ಸಿಪಿಐ ಅಲಿಸಾಬ್ ಮಾತನಾಡಿದರು. ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಬಸವಕುಮಾರ ಸ್ವಾಮೀಜಿ, ಪಾಂಡೊಮಟ್ಟಿಯ ಶ್ರೀ ಗುರುಬಸವ ಸ್ವಾಮಿ, ಬಸವ ಧರ್ಮ ಪೀಠದ ಜಂಗಮ ಮೂರ್ತಿಗಳು ನೇತೃತ್ವ, ಮೆರವಣಿಗೆ ಸಮಿತಿ ಅಧ್ಯಕ್ಷ ಪ್ರದಿಪ ವಾತಡೆ ಅಧ್ಯಕ್ಷತೆ ವಹಿಸಿದ್ದರು. ಹುಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ, ಪ್ರಮುಖರಾದ ಸೋಮಶೇಖರ ಪಾಟೀಲ್ ಗಾದಗಿ, ಬಸವರಾಜ ಬುಳ್ಳಾ, ಆರ್.ಜಿ.ಶೆಟಕಾರ, ಶಿವಶರಣ ಪಾಟೀಲ್ ಹುಗ್ಗೆ, ಅಲ್ಲಂಪ್ರಭು ನಾವದಗೆ, ರವಿ ಕೊಳಕೂರ, ರಾಜೇಂದ್ರಕುಮಾರ ಗಂದಗೆ, ಬಸವರಾಜ ಕೊರಕೆ, ಜಗನ್ನಾಥ ಖೂಬಾ, ಶಿವಕುಮಾರ ಬಿರಾದಾರ, ಜಗದೀಶ ಪಾಟೀಲ್, ರಾಜಶೇಖರ ಬಿರಾದಾರ, ಆಕಾಶ ಖಂಡಾಳೆ, ರಾಜು ಶೆಟಕಾರ, ಮಹಾದೇವ ಬೇಲೂರೆ, ಸಿದ್ದಪ್ಪ ಉಳ್ಳೆ, ಶಿವಲಿಂಗಯ್ಯ ಕನಾಡೆ, ದತ್ತಾತ್ರೇಯ ರಾಘೋ ಸೇರಿ ಇತರರು ಭಾಗವಹಿಸಿದ್ದರು.
ಮರು ಪ್ರಸ್ತಾವನೆಗೆ ಹಕ್ಕೊತ್ತಾಯ
ಬಸವಕಲ್ಯಾಣ: ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಲು ಕೇಂದ್ರಕ್ಕೆ ಮರು ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಬಸವ ದಳದಿಂದ ಒತ್ತಾಯಿಸಬೇಕು ಎನ್ನುವುದು ಸೇರಿ 5 ಮಹತ್ವದ ರ್ನಿಣಯಗಳನ್ನು 25ನೇ ಕಲ್ಯಾಣ ಪರ್ವ ರಜತ ಮಹೋತ್ಸದ ವೇದಿಕಯಲ್ಲಿ ಮಂಡಿಸಲಾಯಿತು.
ನಗರದ ಬಸವ ಮಹಾಮನೆ ಪರಿಸರದಲ್ಲಿ ಸೋಮವಾರ ನಡೆದ ಕಲ್ಯಾಣ ಪರ್ವ ರಜತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಹಾಜಗದ್ಗುರು ಡಾ.ಮಾತೆ ಗಂಗಾದೇವಿ ಸಾನ್ನಿಧ್ಯದಲ್ಲಿ ಸ್ವಾಗತ ಸಮಿತಿ ಕೋಶ ಕಾರ್ಯದರ್ಶಿ ರಾಜೇಂದ್ರ ಜೊನ್ನಿಕೇರಿ ಐದು ರ್ನಿಣಯಗಳನ್ನು ಮಂಡಿಸಿದರು. ಇದಕ್ಕೆ ನೆರೆದಿದ್ದ ಬಸವ ಭಕ್ತರು ಕರತಾಡನದ ಮೂಲಕ ಸಮ್ಮತಿಸಿದರು.
ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಲು ಕೋರಿ ಈ ಹಿಂದೆ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರದಿಂದ ಬಂದಿರುವ ಆಕ್ಷೇಪಣೆಗಳಿಗೆ ಸೂಕ್ತ ದಾಖಲೆಗಳೊಂದಿಗೆ ಸಮರ್ಪಕ ಉತ್ತರ ನೀಡಿ ಮರು ಪ್ರಸ್ತಾವನೆ ಸಲ್ಲಿಸಬೇಕು ಎನ್ನುವ ರ್ನಿಣಯ ಕೈಗೊಳ್ಳಲಾಯಿತು.
ಬಸವಣ್ಣನವರನ್ನು ರಾಷ್ಟ್ರ ಮಟ್ಟದ ಸಾಂಸತಿಕ ನಾಯಕರೆಂದು ಘೋಷಿಸಿ ರಾಷ್ಟ್ರ ಮಟ್ಟದಲ್ಲಿ ಬಸವ ಜಯಂತಿಗೆ ರಜೆ ನೀಡಿ ಬಸವ ಜಯಂತಿ ಆಚರಿಸಬೇಕು. ಬಸವಕಲ್ಯಾಣವು ಅಂತಾರಾಷ್ಟ್ರೀಯ ಧಾರ್ಮಿಕ ಕೇಂದ್ರವಾಗುತ್ತಿರುವ ಹಿನ್ನಲೆಯಲ್ಲಿ ರೈಲ್ವೆ ಸಂಪರ್ಕ ಕಲ್ಪಿಸಿ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಲಾಯಿತು.
ಬೆಂಗಳೂರಿನಲ್ಲಿರುವ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಮತ್ತು ನಮ್ಮ ಮೆಟ್ರೊ ಬೆಂಗಳೂರಿಗೆ ಗುರು ಬಸವಣ್ಣನವರ ಹೆಸರು ಇಡಬೇಕು. ಗುಲ್ಬರ್ಗ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಬಸವಣ್ಣನವರ ಹೆಸರಿಡಬೇಕು. ರಾಷ್ಟ್ರದ ಎಲ್ಲ ಭಾಷೆಗಳಿಗೆ ವಚನ ಸಾಹಿತ್ಯ, ಶರಣರ ಜೀವನ ಸಂದೇಶ ಭಾಷಾಂತರ ಮಾಡಬೇಕು. ದೇಶದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಬಸವೇಶ್ವರ ಅಧ್ಯಯನ, ಸಂಶೋಧನಾ ಕೇಂದ್ರ ಪ್ರಾರಂಭಿಸಬೇಕು ಎಂದು ಒತ್ತಾಯಿಸಲಾಯಿತು.
ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಶ್ರೀ ಮಹಾ ಜಗದ್ಗುರು ಡಾ.ಮಾತೆ ಗಂಗಾದೇವಿ, ಜಗದ್ಗುರು ಶ್ರೀ ಸಿದ್ಧರಾಮೇಶ್ವರ ಸ್ವಾಮಿ, ಜ್ಞಾನೇಶ್ವರಿ, ಲಾವಣ್ಯ ಮಾತಾಜಿ, ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಬಸವರಾಜ ಬುಳ್ಳಾ, ರಾಜ್ಯಾಧ್ಯಕ್ಷ ಕೆ.ವೀರೇಶ, ಸ್ವಾಗತ ಸಮಿತಿ ಅಧ್ಯಕ್ಷ ಸೋಮಶೇಖರ್ ಪಾಟೀಲ ಗಾದಗಿ, ಕಾರ್ಯಾಧ್ಯಕ್ಷ ಜೈರಾಜ ಖಂಡ್ರೆ, ರಾಜೆಂದ್ರಕುಮಾರ ಗಂದಗೆ, ರವೀಂದ್ರ ಕೊಳಕುರ, ಸುರೇಶ್ ಸ್ವಾಮಿ, ಸಂಜೀವಕುಮಾರ ಪಾಟೀಲ, ಶಿವಶರಣಪ್ಪ ಹುಗ್ಗೆ ಪಾಟೀಲ, ಸಂಗಮೇಶ ಜವಾದಿ, ರಾಜೇಶ್ವರಿ ಖೂಬಾ ಇತರರಿದ್ದರು. ನವಲಿಂಗ ಪಾಟೀಲ ನಿರೂಪಣೆ ಮಾಡಿದರು.