ಔರಾದ್​ ತಾಲೂಕಿನ ಶೆಂಬೆಳ್ಳಿ ಗ್ರಾಪಂ ವ್ಯಾಪ್ತಿಯ ಚಟ್ನಾಳದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್​ ಏಣಿ ಹತ್ತಿ ನೀರು ಸಂಗ್ರಹಣಾ ಟ್ಯಾಂಕ್​ ಒಳಭಾಗದ ಸ್ವಚ್ಛತೆ ವೀಕ್ಷಿಸಿದರು. ತಾಪಂ ಇಒ ಕಿರಣ ಪಾಟೀಲ್​, ಎಡಿ ಶಿವಕುಮಾರ ಘಾಟೆ, ಡಾ.ಗೌತಮ್​ ಅರಳಿ, ಎಇಇ ಮಾರುತಿ ರಾಠೋಡ, ಟಿಎಚ್​ಒ ಡಾ.ಅನಿಲಕುಮಾರ ಎಕಲಾರೆ, ಎಡಿ ಉತ್ತಮ, ತುಕಾರಾಮ ಇತರರಿದ್ದರು. 
ಬೀದರ್

ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ

ಔರಾದ್​: ಗ್ರಾಮೀಣ ಭಾಗದ ಜನರಿಗೆ ಮೂಲಸೌಕರ್ಯ ಸಮರ್ಪಕವಾಗಿ ದೊರೆಯುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್​ ಸೂಚಿಸಿದರು.

ಗುರುವಾರ ಬೆಳಂಬೆಳ್ಳಗೆ ತಾಲೂಕಿನ ಧೂಪತಮಹಾಗಾಂವ, ಚಟ್ನಾಳ, ಸಂತಪುರ ಹಾಗೂ ಹೆಡಗಾಪುರ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಸೇವೆ ಹಾಗೂ ಗ್ರಾಮೀಣ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿ ಜನರಿಗೆ ನಿರಂತರವಾಗಿ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.

ಶೆಂಬೆಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಟ್ನಾಳ ಗ್ರಾಮದಲ್ಲಿ ಮನೆ-ಮನೆಗೆ ಭೇಟಿ ನೀಡಿ ಕುಡಿಯುವ ನೀರಿನ ನಳಗಳ ಸ್ಥಿತಿಯನ್ನು ಪರಿಶೀಲಿಸಿದರು. ಬಳಿಕ ನೀರು ಸಂಗ್ರಹಣಾ ಟ್ಯಾಂಕ್​ ಒಳಭಾಗದ ಸ್ವಚ್ಛತೆಯನ್ನು ವೀಕ್ಷಿಸಿ, ಟ್ಯಾಂಕ್​ನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮಕೈಗೊಳ್ಳುವಂತೆ ತಿಳಿಸಿದರು.

ವಿಬಿ-&ಜಿ ರಾಮ್​ ಜಿ ಯೋಜನೆಯಡಿ ಚಟ್ನಾಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಂಟೂರ್​ ಟ್ರೆಂಚ್​ (ಸಿಸಿಟಿ) ಕಾಮಗಾರಿಯನ್ನು ಪರಿಶೀಲಿಸಿದ ಸಿಇಒ, ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕೂಲಿಕಾರ್ಮಿಕರೊಂದಿಗೆ ಕಾಮಗಾರಿಯ ಕುರಿತು ಚರ್ಚಿಸಿದರು.

ಹೆಡಗಾಪುರದಲ್ಲಿರುವ ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಕಾಮಗಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಶು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಔರಾದ್​ ತಾಪಂ ಇಒ ಕಿರಣ ಪಾಟೀಲ್​, ಕಮಲನಗರ ತಾಪಂ ಇಒ ಹಣಮಂತರಾಯ ಕೌಟಗೆ, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಡಾ.ಗೌತಮ್​ ಅರಳಿ, ಎಇಇ ಮಾರುತಿ ರಾಠೋಡ್​, ಟಿಎಚ್​ಒ ಡಾ.ಅನಿಲಕುಮಾರ ಎಕಲಾರೆ, ಎಡಿ ಉತ್ತಮ, ತುಕಾರಾಮ, ಪಿಡಿಒಗಳಾದ ಸಂತೋಷ ಪಾಟೀಲ್​, ನಾಗೇಶ ಮುಕ್ರಂಬೆ, ಶರಣಪ್ಪ ಗಾದಗೆ, ನಂದಕುಮಾರ ಶಾಸ್ತ್ರೀ, ತಾಪಂ ಟಿಸಿ ಆನಂದ ಕಾಳಗಾಪುರೆ, ಟಿಎ ಸಂದೀಪ್​, ಶರಣಪ್ಪ, ಪರಮೇಶ್ವರ್​, ಟಿಐಇಸಿ ಅಂಬಾದಾಸ ಪಾಟೀಲ್​, ಜ್ಞಾನೇಶ್ವರ, ಶ್ರೀಮಂತ ಪಾಟೀಲ್​ ಇತರರಿದ್ದರು.