ಔರಾದ್: ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ನಿರ್ವಾಹಕ ಧೂಳಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಬಸ್ ನಿಲ್ದಾಣದ ಎದುರು ಜಮಾಯಿಸಿದ ಪ್ರತಿಭಟನಾಕಾರರು ನಿರ್ವಾಹಕ ಧೂಳಪ್ಪ ವಿರುದ್ಧ ಧಿಕ್ಕಾರದ ೂಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ಬಸ್ಗಳನ್ನು ತಡೆದಿದ್ದರಿಂದ ಸಾರಿಗೆ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.
ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ್ದನ್ನು ಸಾರಿಗೆ ಇಲಾಖೆ ಗಂಭೀರ ಪರಿಗಣಿಸಿ ನಿರ್ವಾಹಕನನ್ನು ಅಮಾನತು ಮಾಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕ್ರಮ ಕೈಗೊಳ್ಳುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟುಹಿಡಿದರು.
ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಘಟಕ ವ್ಯವಸ್ಥಾಪಕ ಮಲ್ಲಿಕಾರ್ಜುನ ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆಸಿದರು. ಆದರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಆಗಮಿಸಿ ಅಮಾನತು ಕುರಿತು ಸ್ಪಷ್ಟ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು. ನಂತರ ಡಿಟಿಒ ಶಾರದಾದೇವಿ ಆಗಮಿಸಿ ಧೂಳಪ್ಪ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದುಕೊಂಡರು.
ಎಬಿವಿಪಿ ವಿಭಾಗ ಸಂಚಾಲಕ ಪವಾನ್ ಕುಂಬಾರ, ಜಿಲ್ಲಾ ಸಂಚಾಲಕ ನಾಗರಾಜ ಸುಲ್ತಾನಪುರೆ, ಪ್ರಮುಖರಾದ ಸುರೇಶ ಮರ್ತಳೆ, ಅಶೋಕ ಶೆಂಬೆಳ್ಳಿ, ಹಾವಪ್ಪ ದ್ಯಾಡೆ, ಅಂಬಾದಾಸ ನಳಗೆ, ಅಭಿಷೇಕ ಮಾನೆ, ಅಭಿಷೇಕ ಪಾಟೀಲ್, ಕಲ್ಲೇಶ ಬಿರಾದಾರ್, ಅಂಬಿಕಾ, ಭಾಗ್ಯಲತಾ, ಮಾರುತಿ ಉದಗೀರೆ, ಪವನ್ ಬುಕ್ಕಾ, ಜಗದೀಶ ಇತರರಿದ್ದರು.