ಔರಾದ: ಶೆಂಬೆಳ್ಳಿ ಗ್ರಾಮದ ಇಂದುಮತಿ ವೈಜಿನಾಥ ಮೇತ್ರೆ ಅವರ ಕುಟುಂಬಕ್ಕೆ ಸರ್ಕಾರದಿಂದ ಕೂಡಲೇ ಕನಿಷ್ಠ 30 ಲಕ್ಷಗಳ ವಿಶೇಷ ಆರ್ಥಿಕ ನೆರವು ಮಂಜೂರು ಮಾಡಬೇಕೆಂದು ಶಾಸಕ ಪ್ರಭು ಚವ್ಹಾಣ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಶಾಸಕರು, ಜೀವನೋಪಾಯಕ್ಕಾಗಿ ಕಳೆದ 7–8 ವರ್ಷಗಳಿಂದ ಹೈದ್ರಾಬಾದ್‌ನಲ್ಲಿ ನೆಲೆಸಿದ್ದ ಈ ಕುಟುಂಬವು ಕೆಲ ದಿನಗಳ ಹಿಂದೆ ಸಂಭವಿಸಿದ ದುರ್ಘಟನೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ತಿಳಿಸಿದ್ದಾರೆ.
ಕುಟುಂಬದ ಸದಸ್ಯರು ಮಾವಿನ ಹಣ್ಣು ಸೇವಿಸಿದ ಬಳಿಕ ಅಸ್ವಸ್ಥಗೊಂಡಿದ್ದು, ಐದು ಜನ ಹೆಣ್ಣು ಮಕ್ಕಳ ಪೈಕಿ ಇಬ್ಬರು ಮಕ್ಕಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮತ್ತೊಬ್ಬ ಬಾಲಕಿ ಹೈದ್ರಾಬಾದ್‌ನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಈ ಕುಟುಂಬ ಈಗಾಗಲೇ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿದ್ದು, ದಂಪತಿಗಳಿಬ್ಬರೂ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದುಡಿಮೆ ಮಾಡುವವರು ಯಾರೂ ಇಲ್ಲ, ಇಬ್ಬರು ಮಕ್ಕಳನ್ನು ಕಳೆದುಕೊಂಡ ನೋವು, ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಹಾಗೂ ಉಳಿದ ಮಕ್ಕಳ ಭವಿಷ್ಯದ ಚಿಂತೆಯಿಂದ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ ಎಂದು ಸಮಸ್ಯೆಯ ಗಂಭೀರತೆಯ ಬಗ್ಗೆ ತಿಳಿಸಿದ್ದಾರೆ.
ಈ ಹಿನ್ನೆಲೆ ಮಾನವೀಯ ದೃಷ್ಟಿಯಿಂದ ಪ್ರಕರಣವನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಕ್ಷಣವೇ 30 ಲಕ್ಷಗಳ ವಿಶೇಷ ಆರ್ಥಿಕ ನೆರವು ಮಂಜೂರು ಮಾಡುವ ಮೂಲಕ ಉಳಿದ ಮಕ್ಕಳ ಶಿಕ್ಷಣ, ಚಿಕಿತ್ಸೆ, ಕುಟುಂಬದ ಪುನರ್ವಸತಿ ಹಾಗೂ ಭವಿಷ್ಯದ ಭದ್ರತೆಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಜೊತೆಗೆ, ಕುಟುಂಬಕ್ಕೆ ಸ್ವಂತ ಮನೆ ಇಲ್ಲದಿರುವ ಹಿನ್ನೆಲೆ ಸರ್ಕಾರದ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಶಾಸಕರು ಮನವಿ ಮಾಡಿದ್ದಾರೆ.