ಬೀದರ್; ಹನ್ನೆರಡನೆಯ ಶತಮಾನದ ಶರಣರು ಕಲ್ಯಾಣ ತೊರೆದದ್ದು ಮಾನವೀಯ ಮೌಲ್ಯಗಳ ಆಗರವಾದ ವಚನ ಸಾಹಿತ್ಯದ ಉಳಿಸುವುದಕ್ಕಾಗಿಯೇ ವಿನಃ ಬಿಜಳ್ಳನ ಸೈನ್ಯಕ್ಕೆ ಅಂಜಿ ಅಲ್ಲ ಎಂದು ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.
ಇಲ್ಲಿಯ ಬಸವಗಿರಿಯಲ್ಲಿ ಭಾನುವಾರ ನಡೆದ ಲಿಂಗಾಯತ ಮಹಾ ಮಠದಿಂದ ಹಮ್ಮಿಕೊಳ್ಳಲಾದ ಮರಣವೇ ಮಹಾನವಮಿ ಮಹೋತ್ಸವ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಶರಣರು ಮರಣಕ್ಕೆ ಅಂಜಿದವರಲ್ಲ. ಬಿಜ್ಜಳನ ಸೈನ್ಯ-ಸಂಪ್ರದಾಯವಾದಿಗಳನ್ನು ಎದುರಿಸಿ, ತಮ್ಮ ಪ್ರಾಣ ಬಲಿದಾನ ನೀಡಿ, ಮುಂದಿನ ಪೀಳಿಗೆಗೆ ವಚನ ಸಾಹಿತ್ಯ ಉಳಿಸಿದ್ದಾರೆ ಎಂದು ತಿಳಿಸಿದರು.
ಶರಣರು ಸಮಾಜಕ್ಕೆ ಕೊಟ್ಟ ಕೊಡುಗೆಯನ್ನು ತಿಳಿಸುವುದು ಹಾಗೂ ಅವರ ಆದರ್ಶಗಳನ್ನು ಅನುಸರಿಸಲು ಪ್ರೇರಣೆ ನೀಡುವುದೇ ಮರಣವೇ ಮಹಾನವಮಿ ಮಹೋತ್ಸವ ಆಯೋಜನೆಯ ಉದ್ದೇಶವಾಗಿದೆ ಎಂದು ಹೇಳಿದರು.
ಗುರುವಿನ ಉದಯವಾದವನ ಬದುಕು ಬಂಗಾರವಾಗುತ್ತದೆ. ಹಿಂದಿನ ಕತ್ತಲೆ ಕಳೆದು ಬೆಳಕು ಮೂಡುತ್ತದೆ. ಬೆಳಕು ಬೆಳದಿಂಗಳಾಗಿ ಮುನ್ನಡೆಸಿ ಉದ್ಧರಿಸುತ್ತದೆ ಎಂದು ತಿಳಿಸಿದರು.
ಗುರು ಕರುಣೆಯಾಗಲು ಭಕ್ತ ಚತುರ್ವಿಧ ಭಕ್ತಿಯಿಂದ ಗುರು ಸೇವೆ ಮಾಡಬೇಕು ಎಂದು ಹೇಳಿದರು.
ಜಗ ಬದುಕಲಿ, ಜನ ಬದಕುಲೆಂದು ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರು ಕಲ್ಯಾಣ ಕ್ರಾಂತಿಗೈದರು ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾದೇವಿ ರಮೇಶ ಮಠಪತಿ ತಿಳಿಸಿದರು.
ಅಂದು ಧರ್ಮದ ಉಳಿವಿಗಾಗಿ ಹರಳಯ್ಯ, ಮಧುವರಸ, ಶೀಲವಂತರಾದಿಯಾಗಿ ಅನೇಕ ಶರಣ-ಶರಣೆಯರು ಪ್ರಾಣ ಬಲಿದಾನಗೈದರು. ಅವರ ತ್ಯಾಗ-ಬಲಿದಾನಗಳ ಸ್ಮರಣೆಗಾಗಿ ಪ್ರತಿ ವರ್ಷವೂ ಬಸವಗಿರಿಯಲ್ಲಿ ಒಂಬತ್ತು ದಿನಗಳ ಮರಣವೇ ಮಹಾನವಮಿ ಮಹೋತ್ಸವ ಆಚರಿಸಲಾಗುತ್ತಿದೆ. ಈ ಆಚರಣೆ ಆರಂಭಿಸಿದ ಶ್ರೇಯಸ್ಸು ಅಕ್ಕ ಅಕ್ಕಅನ್ನಪೂರ್ಣತಾಯಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಅಕ್ಕ ಅವರು ಅಡುಗೆ ಮನೆಗೆ ಸೀಮಿತರಾಗಿದ್ದ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿ, ವೇದಿಕೆಗೆ ತಂದು ನಿಜ ಮಹಿಳಾ ಸಬಲೀಕರಣ ಮಾಡಿದ್ದರು ಎಂದು ತಿಳಿಸಿದರು.
ಬಸವಣ್ಣ ಹಾಗೂ ಹರಳಯ್ಯನವರಂಥ ಗುರು- ಶಿಷ್ಯರು ಈ ಭೂಮಿ ಮೇಲೆ ಸಿಗಲಾರರು. ಬಸಸವಣ್ಣನವರು ಒಂದು ಶರಣು ಹೆಚ್ಚಿಗೆ ಸಲ್ಲಿಸಿದರೆಂದು, ಅದರ ಋಣ ತೀರಿಸಲು ಹರಳಯ್ಯ-ಕಲ್ಯಾಣಮ್ಮನವರು ತಮ್ಮ ಶರೀರದ ಚರ್ಮ ತೆಗೆದು ಪಾದರಕ್ಷೆ ಮಾಡಿ ಗುರುವಿಗೆ ಸಲ್ಲಿಸಿದ್ದು ನ ಭುತೋ ನ ಭವಿಷ್ಯ ತಿ ಎಂದು ಹೇಳಿದರು.
ಬಸವಗಿರಿಯಲ್ಲಿ ಒಂಬತ್ತು ದಿನಗಳ ಕಾಲ ಒಂಬತ್ತು ವಿಷಯಗಳ ಚಿಂತನೆ ಮೂಡಿ ಬರಲಿದ್ದು, ಇಂಥ ಕಾರ್ಯಕ್ರಮ ಆಯೋಜಿಸಿರುವ ಪ್ರಭುದೇವರಿಗೆ ಕೃತಜ್ಞತೆ ಅರ್ಪಿಸಲಾಗುವುದು ಎಂದು ತಿಳಿಸಿದರು.
ಕತ್ತಲಿನಿಂದ ಬೆಳಕಿನೆಡೆಗೆ ನಡೆಸುವವನೇ ಗುರು. ಸದ್ಗುರುವಿನ ಕೃಪೆಗಾಗಿ ಹಂಬಲಿಸಿ, ಸಂಪೂರ್ಣ ಶರಣಾಗತನಾಗುವವನಿಗೆ ಮಾತ್ರ ಗುರು ಕೃಪೆ ಆಗುತ್ತದೆ ಎಂದು ಗುರು ಕೃಪೆ ಯಾರಿಗೆ ಕುರಿತು ಉಪನ್ಯಾಸ ನೀಡಿದ ಸರೋಜಾ ಕುಬೇರಪ್ಪ ಹೇಳಿದರು.
ಯಾರ ಜೀವನದಲ್ಲಿ ಗುರು ಪ್ರವೇಶವಾಗುವುದೋ ಅವರ ಜೀವನ ಪಾವನವಾಗುತ್ತದೆ ಎಂದರು.
ಅಕ್ಕ ಅನ್ನಪೂರ್ಣತಾಯಿ ಅವರ ಕಾರ್ಯವನ್ನು ಭಕ್ತಿ-ಶ್ರದ್ಧೆಯಿಂದ ಮುಂದುವರಿಸುತ್ತಿರುವ ಪ್ರಭುದೇವ ಸ್ವಾಮೀಜಿ ಅವರ ಕಾರ್ಯ ಶ್ಲಾಘನೀಯ ಎಂದು ಬಣ್ಣಿಸಿದರು.
ಚಿಂತಕಿ ಸರೋಜಾ ಶೆಟಕಾರ್ ಸಸಿಗೆ ನೀರೆರೆದು, ವಚನ ಪಠಣಗೈದು ಮರಣವೇ ಮಹಾನವಮಿ ಮಹೋತ್ಸವಕ್ಕೆ ಚಾಲನೆ ನೀಡಿದರು. ವರ್ಷಾ ಪಾಟೀಲ, ಸುನಂದಾ ಶೇರಿಕಾರ್ ಮುಖ್ಯ ಅತಿಥಿಯಾಗಿದ್ದರು. ಕೋಮಲಾ ಬಿರಾದಾರ ವಿಶೇಷ ಆಹ್ವಾನಿತರಾಗಿದ್ದರು. ಶೋಭಾ ಕೊಡಂಬಲ್ ಅಧ್ಯಕ್ಷತೆ ವಹಿಸಿದ್ದರು.
ಶಿವನಗರ ಉತ್ತರದ ನೀಲಮ್ಮನ ಬಳಗದವರು ನಡೆಸಿಕೊಟ್ಟ ವಚನ ಭಜನೆ ಸಭಿಕರನ್ನು ಭಕ್ತಿ ಭಾವದಲ್ಲಿ ತೇಲಿಸಿತು. 'ತವರು ಮನೆ' ಜಾನಪದ ಗೀತೆ ನೃತ್ಯ ಭಾವಪೂರ್ಣವಾಗಿ ಮೂಡಿ ಬಂದಿತು. ಎಲ್ಲರನ್ನು ರಂಜಿಸಿತು.
ಪ್ರೇಮಲತಾ ಕುಲಾಲ್ ಸ್ವಾಗತಿಸಿದರು. ಕವಿತಾ ಪಾಟೀಲ, ಹೇಮಲಾ ಬರಿದಾಬಾದ್ ಸುಶ್ರಾವ್ಯವಾಗಿ ವಚನ ಗಾಯನ ಮಾಡಿದರು. ಸಂಗೀತಾ ಗಣಾಚಾರಿ ಅಚ್ಚುಕಟ್ಟಾಗಿ ನಿರೂಪಿಸಿದರು. ಶಿವಾನಿ ರೇವಣಸಿದ್ದಯ್ಯ ಗಣಾಚಾರಿ ಭಕ್ತಿ ದಾಸೋಹಗೈದರು. ಜ್ಯೋತಿ ಗೋರ್ಟೆಕರ್ ವಂದಿಸಿದರು.