ಸಕ್ಕರೆ ಸಚಿವರಿಗೆ ರಾಜಶೇಖರ ಪಾಟೀಲ್ ನೇತೃತ್ವದ ನಿಯೋಗ ಮನವಿ
ಹುಮನಾಬಾದ್: ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಎಸ್ಕೆ) ಪುನಶ್ಚೇತನಗೊಳಿಸುವಂತೆ ಒತ್ತಾಯಿಸಿ ಮಾಜಿ ಸಚಿವ ರಾಜಶೇಖರ ಪಾಟೀಲ್ ನೇತೃತ್ವದಲ್ಲಿ ರೈತರು ಹಾಗೂ ಕಾರ್ಮಿಕರ ನಿಯೋಗ ಮಂಗಳವಾರ ಬೆಂಗಳೂರಿನಲ್ಲಿ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಜಿಲ್ಲೆಯ ರೈತರು ಹಾಗೂ ಕಬ್ಬು ಬೆಳೆಗಾರರ ಜೀವನಾಡಿಯಾಗಿರುವ ಬಿಎಸ್ಎಸ್ಕೆ ಸ್ಥಗಿತಗೊಂಡಿರುವುದರಿಂದ ಕಾರ್ಖಾನೆಯನ್ನು ಅವಲಂಬಿಸಿರುವ ರೈತರು, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಮಧ್ಯಸ್ಥಿಕೆ ವಹಿಸಿ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ರಾಜಶೇಖರ ಪಾಟೀಲ್ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಸಚಿವ ರುದ್ರಪ್ಪ ಲಮಾಣಿ, ಬಿಎಸ್ಎಸ್ಕೆ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ನಂತರ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಮಾಜಿ ಸದಸ್ಯ ಅರವಿಂದಕುಮಾರ ಅರಳಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಮಂತರಾವ ಬಿರಾದಾರ, ಗೌರವಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ, ಬಿಎಸ್ಎಸ್ಕೆ ಕಾರ್ಮಿಕರಾದ ರಾಜಶೇಖರ ಹಂದ್ರಾಳೆ, ಅರ್ಜುನ್ ತಮಗಿಕರ್, ಗುರುಲಿಂಗಯ್ಯ ಹಾಲಾ, ಝರ್ನಾರಡ್ಡಿ, ರಾಜು ಪಾಟೀಲ್, ಮಲ್ಲಿಕಾರ್ಜುನ ಭಂಡಾರಿ, ಶಿವಕುಮಾರ ಚಳಕಾಪುರೆ, ಝರನು ಕಾವಲೆ, ಜಾನ್ಸನ್ ಇತರರಿದ್ದರು.
ಬಿಎಸ್ಎಸ್ಕೆ ಹರಾಜು ಪ್ರಕ್ರಿಯೆ ತಡೆಯುವಂತೆ ಮಾಜಿ ಸಚಿವ ರಾಜಶೇಖರ ಪಾಟೀಲ್ ಹಲವು ಬಾರಿ ಒತ್ತಾಯಿಸಿದ್ದಾರೆ. ರೈತರ ಹಿತದೃಷ್ಟಿಯಿಂದ ಅಗತ್ಯ ಕ್ರಮಕೈಗೊಂಡು ಕಾರ್ಖಾನೆಯನ್ನು ಲೀಜ್ಗೆ ನೀಡಿ ಮರು ಆರಂಭಿಸುವ ಮೂಲಕ ರೈತರ ಹಿತ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಭರವಸೆ ನೀಡಿದ್ದಾರೆ ಎಂದು ನಿಯೋಗದ ಮುಖಂಡರು ತಿಳಿಸಿದ್ದಾರೆ.