ಬೀದರ್ ನಲ್ಲಿ ಬಸವಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು. 
ಬೀದರ್

ರವಿ ಹುಂಜ ಪ್ರತಿಕೃತಿ ದಹನ

ಬಸವ ಪರ ಸಂಘಟನೆಗಳಿಂದ ಪ್ರತಿಭಟನೆ

ಬೀದರ್: ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವ ಅನಿವಾಸಿ ಭಾರತೀಯ ಲೇಖಕ ರವಿ ಹುಂಜ ವಿರುದ್ಧ ಬಸವ ಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ನೇತೃತ್ವದಲ್ಲಿ ಬಸವೇಶ್ವರ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ರವಿ ಹುಂಜ ವಿರುದ್ಧ ಘೋಷಣೆಗಳನ್ನು ಕೂಗಿದರು. ಅವರ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ, ಚಪ್ಪಲಿ ಏಟು ಕೊಟ್ಟರು. ಬಳಿಕ ಪ್ರತಿಕೃತಿ ಸುಟ್ಟು ಆಕ್ರೋಶ ಹೊರ ಹಾಕಿದರು.
ನಂತರ ನ್ಯೂ ಟೌನ್ ಪೊಲೀಸ್ ಠಾಣೆಗೆ ತೆರಳಿ ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳ, ಭಾರತೀಯ ಬಸವ ಬಳಗ, ಲಿಂಗಾಯತ ಸಮಾಜ, ಬಸವ ಕೇಂದ್ರ ಹಾಗೂ ಇತರ ಬಸವ ಪರ ಸಂಘಟನೆಗಳ ವತಿಯಿಂದ ರವಿ ಹುಂಜ ವಿರುದ್ಧ ಸಾಮೂಹಿಕ ದೂರು ಸಲ್ಲಿಸಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಅವರಿಗೆ ಸಲ್ಲಿಸಿದರು.
ಬಸವಣ್ಣನವರು 12ನೇ ಶತಮಾನದಲ್ಲೇ ಸಮಾನತೆ, ಕಾಯಕ, ದಾಸೋಹ, ಸಾಮಾಜಿಕ ನ್ಯಾಯ ಹಾಗೂ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಮಹಾನ್ ದಾರ್ಶನಿಕರು. ರವಿ ಹುಂಜ ಬಸವಣ್ಣನವರ ವ್ಯಕ್ತಿತ್ವವನ್ನು ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಿರುವುದು ತೀವ್ರ ಖಂಡನೀಯ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು ಹೇಳಿದರು.
ಇತಿಹಾಸದ ಕುರಿತು ವಿಮರ್ಶೆ ಮಾಡುವ ಸ್ವಾತಂತ್ರ್ಯ ಇದ್ದರೂ, ಸೂಕ್ತ ದಾಖಲೆ ಹಾಗೂ ಆಧಾರಗಳಿಲ್ಲದೆ ಅವಹೇಳನಕಾರಿ ಪದಗಳನ್ನು ಬಳಸುವುದು ಸಲ್ಲದು ಎಂದು ತಿಳಿಸಿದರು.
ಬಸವಣ್ಣನವರ ಘನತೆ ನಮ್ಮ ಸ್ವಾಭಿಮಾನ. ಶರಣರ ವಚನ ಪರಂಪರೆಯ ಗೌರವ ಹಾಗೂ ಬಸವ ತತ್ವದ ಮೌಲ್ಯಗಳ ರಕ್ಷಣೆಗಾಗಿ ನಮ್ಮ ಹೋರಾಟ ಕಾನೂನು ಬದ್ಧವಾಗಿ ಮುಂದುವರಿಯಲಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.
ಸರ್ಕಾರ ರವಿ ಹಂಜ ಅವರನ್ನು ಕೂಡಲೇ ಬಂಧಿಸಿ, ಅವರ ವಿವಾದಾತ್ಮಕ ಕೃತಿ ಬಸವ ಮಂಟಪವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.
ಚನ್ನಬಸವಾನಂದ ಸ್ವಾಮೀಜಿ, ಮಾತೆ ಸತ್ಯದೇವಿ, ಬಸವಪ್ರಭು ಸ್ವಾಮೀಜಿ, ರಾಷ್ಟ್ರೀಯ ಬಸವ ದಳದ ಜಿಲ್ಲಾ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿ ಸುರೇಶ ಸ್ವಾಮಿ, ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಮಿರ್ಚೆ, ಮಲ್ಲಮ್ಮ ಆರ್. ಪಾಟೀಲ, ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಜೊನ್ನಿಕೇರಿ, ಪ್ರಮುಖರಾದ ಶಿವಶರಣಪ್ಪ ಹುಗ್ಗಿ ಪಾಟೀಲ, ಸಿದ್ದಯ್ಯ ಕಾವಡಿಮಠ, ಸಂಜುಕುಮಾರ ಪಾಟೀಲ, ಚಂದ್ರಕಾಂತ ಮಿರ್ಚೆ, ರಮೇಶ ಮಠಪತಿ, ಶಿವಶರಣಪ್ಪ ಪಾಟೀಲ ಹಾರೂರಗೇರಿ, ಶಿವಶಂಕರ ಟೋಕರೆ, ಯೋಗೇಂದ್ರ ಯದಲಾಪುರೆ, ರಾಜಶೇಖರ ಮಠಪತಿ, ಸಿದ್ದು ಶೆಟಕಾರ್, ರವಿ ಪಾಪಡೆ, ಯೋಗೇಶ್ ಶ್ರೀಗಿರಿ, ಗಣೇಶ ಬಿರಾದಾರ, ಮಲ್ಲಿಕಾರ್ಜುನ ಪಂಚಾಕ್ಷರಿ, ವಿಜಯಕುಮಾರ ಪಾಟೀಲ, ವಿವೇಕ್ ಪಟ್ನೆ, ಅಲ್ಲಮಪ್ರಭು ನಾವದಗೆರೆ, ರೇವಣಪ್ಪ ಮೂಲಗೆ, ರಾಜಕುಮಾರ ಕಮಠಾಣೆ, ಶಶಿಕಲಾ ಚರಾಲ್, ರಾಚಪ್ಪ ಪಾಟೀಲ, ಶಿವರಾಜ ಮದಕಟ್ಟಿ, ಶ್ರೀಕಾಂತ ಬಿರಾದಾರ, ಗುರುನಾಥ ಬಿರಾದಾರ, ರವಿ ದೇಶಮುಖ, ಪ್ರವೀಣ ಎಕಲೂರೆ, ಶಿವಸಾಲಿ ಮೊದಲಾದವರು ಪಾಲ್ಗೊಂಡಿದ್ದರು.