ಔರಾದ್​ ಪಟ್ಟಣದಲ್ಲಿ ಹನಿ ನೀರಿಗಾಗಿ ಪರದಾಡುತ್ತಿರುವ ಸಾರ್ವಜನಿಕರು ಮತ್ತು ಶಾಲಾ&ಕಾಲೇಜು ಮಕ್ಕಳು 
ಬೀದರ್

ಕೊಡ ನೀರಿಗೆ ಸಾರ್ವಜನಿಕರ ಪರದಾಟ

ಔರಾದ್​: ಪಟ್ಟಣಕ್ಕೆ ನೀರು ಪೂರೈಸುವ ಹಾಲಹಳ್ಳಿ ಬ್ಯಾರೇಜ್​ನಲ್ಲಿ ನೀರು ಬರಿದಾದ ಕಾರಣ ಹಲವು ದಿನಗಳಿಂದ ಸಮರ್ಪಕವಾಗಿ ನಲ್ಲಿ ನೀರು ಪೂರೈಕೆಯಾಗದೆ ಸಾರ್ವಜನಿಕರು ಜೀವಜಲಕ್ಕಾಗಿ ಪರದಾಡುವಂತಾಗಿದೆ.

ಈ ವರ್ಷ ಮಳೆ ಕೊರತೆಯಿಂದ ನೀರಿನ ಸಮಸ್ಯೆ ತಲೆದೋರಿದೆ. ನಿತ್ಯ ಪಟ್ಟಣಕ್ಕೆ ಎರಡು ಮಿಲಿಯನ್​ ಲೀಟರ್​ ನೀರಿನ ಅಗತ್ಯವಿದೆ. ನೀರಿನ ಸಮಸ್ಯೆ ಬಗೆಹರಿಸಲು ತಾಲೂಕು ಆಡಳಿತ ಹರಸಾಹಸ ಪಡುತ್ತಿದೆ. ವಿಜಯದಶಮಿ ಹಬ್ಬದಿಂದ ಹಿಡಿದು ದೀಪಾವಳಿ ಹಬ್ಬ ಮುಗಿಯುತ್ತಾ ಬಂದರೂ ಕೂಡ ಪಟ್ಟಣದಲ್ಲಿ ನೀರಿನ ಬವಣೆ ತಪ್ಪಿಲ್ಲ.

ಪಟ್ಟಣದ ಒಟ್ಟು 20 ವಾರ್ಡ್​ಗಳಲ್ಲಿ ಕೇವಲ 06 ವಾರ್ಡ್​ಗಳಲ್ಲಿ ಮಾತ್ರ ನೀರು ಬರುತ್ತಿದ್ದರೆ ಇನ್ನುಳಿದ ವಾರ್ಡ್​ಗಳಲ್ಲಿ ಸಾರ್ವಜನಿಕರು ಮತ್ತು ಶಾಲಾ-ಕಾಲೇಜು ಮಕ್ಕಳು ಟ್ಯಾಂಕರ್​ ನೀರಿಗಾಗಿ ತಮ್ಮ ದಿನ ನಿತ್ಯದ ಕೆಲಸ ಮತ್ತು ಶಾಲಾ ಕಾಲೇಜು ತೊರೆದು ಸರದಿ ಸಾಲಿನಲ್ಲಿ ನಿಂತು ಪರಿತಪಿಸುತ್ತಿದ್ದಾರೆ.

ಪಟ್ಟಣದಲ್ಲಿ ಶಾಶ್ವತ ನೀರು ಪೂರೈಕೆಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪಪಂ ಅಧಿಕಾರಿಗಳ ರ್ನಿಲಕ್ಷ್ಯತನ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಈ ಸಮಸ್ಯೆ ತಂದು ತುರ್ತು ಕ್ರಮಕ್ಕೆ ಒತ್ತಾಯಿಸಲಾಗಿದೆ.

ಇತ್ತೀಚಿಗೆ ಶಾಸಕ ಪ್ರಭು ಚವ್ಹಾಣ್​ ಅಧಿಕಾರಿಗಳ ಸಭೆ ನಡೆಸಿ ಜನ ಹಾಗೂ ಜಾನುವಾರುಗಳಿಗೆ ತೊಂದರೆಯಾಗದಂತೆ ಸೂಕ್ತ ನೀರಿನ ವ್ಯವಸ್ಥೆ ಕಲ್ಪಿಸಲು ಸೂಚಿಸಿದರೂ ಸಹ ಅದು ಇಲ್ಲಿಯವರೆಗೆ ಪ್ರಯೋಜನೆಯಾಗಿಲ್ಲ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಗಮನಹರಿಸಿ ನೀರಿನ ಸಮಸ್ಯೆಯಿಂದ ಮುಕ್ತಿ ದೊರಕಿಸಿ ಕೊಡಬೇಕು ಎಂದು ಸಾರ್ವಜನಿಕರ ಒತ್ತಾಸೆಯಾಗಿದೆ.

ತೇಗಂಪುರ ಕೆರೆಗೆ ಇನ್ನು ಎರಡು 40 ಎಚ್​ಪಿ ದೊಡ್ಡ ಮೋಟಾರ್​ಗಳನ್ನು ಅಳವಡಿಸಿ ವಾರದೋಳಗೆ ಎಲ್ಲ ವಾರ್ಡ್​ಗಳಿಗೆ ನೀರು ಪೂರೈಸಲಾಗುವುದು. ಸದ್ಯಕ್ಕೆ ನೀರಿಲ್ಲದೇ ವಾರ್ಡ್​ಗಳಲ್ಲಿ ಟ್ಯಾಂಕರ್​ ವ್ಯವಸ್ಥೆ ಮಾಡಲಾಗುತ್ತಿದೆ. ಆದಷ್ಟು ಬೇಗನೇ ನೀರಿನ ಸಮಸ್ಯೆ ಬಗೆಹರಿಸಲಾಗುವುದು.
> ಮಹೇಶ ಪಾಟೀಲ್​ ತಹಸೀಲ್ದಾರ್​ ಮತ್ತು ಪಪಂ ಆಡಳಿತಾಧಿಕಾರಿ ಔರಾದ್​
ಒಂದು ತಿಂಗಳಿನಿಂದ ಪಟ್ಟಣದಲ್ಲಿ ಹನಿ ನೀರಿಗಾಗಿ ಪರದಾಡುವ ಪ್ರಸಂಗ ಎದುರಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮುಂದೆ ಬರಲಿ.
> ಆಕಾಶ ದ್ಯಾಡೆ ಸ್ಥಳಿಯ ನಿವಾಸಿ ಔರಾದ್​