ಹುಮನಾಬಾದ್: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ (ಕೆಕೆಆರ್ಎಸ್) ಬೀದರ್ ಜಿಲ್ಲಾ ಘಟಕದಿಂದ ಗುರುವಾರ ಬೆಳಗ್ಗೆ 11 ಗಂಟೆಯಿಂದ ರಾಷ್ಟ್ರೀಯ ಹೆದ್ದಾರಿ 65ರ ಆರ್ಟಿಒ ಚೆಕ್ಪೋಸ್ಟ್ ಸಮೀಪ ಅಹೋರಾತ್ರಿ ಸಂಚಾರ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಸಂಘದ ಪದಾಧಿಕಾರಿಗಳು, ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಬುಧವಾರ ಕರೆದಿದ್ದ ಪೂರ್ವಭಾವಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಹಕ್ಕುಗಳ ರಕ್ಷಣೆ ಹಾಗೂ ಕೃಷಿ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ನಡೆಸಲಾಗುತ್ತಿದೆ. ಸರ್ಕಾರಗಳು ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಟನ್ ಕಬ್ಬಿಗೆ ಐದು ಸಾವಿರ ರೂ.ಎಫ್ಆರ್ಪಿ ನಿಗದಿಪಡಿಸಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಆರು ಸಾವಿರ ರೂ.ನಿಗದಿಗೊಳಿಸಬೇಕು. ಬರಪೀಡಿತ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಬೆಳೆ ನಷ್ಟಕ್ಕೆ ಎಕರೆಗೆ 50,000 ರೂ.ಪರಿಹಾರ ನೀಡಬೇಕು. ನೀರಾವರಿ ಪಂಪ್ಸೆಟ್ಗಳಿಗೆ ಹಗಲಿನ ವೇಳೆಯಲ್ಲಿ 10 ಗಂಟೆ ವಿದ್ಯುತ್ ಪೂರೈಸಬೇಕು. ಕಾಡುಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಲು ರೈತರಿಗೆ ಶೇ.90 ರಿಯಾಯಿತಿಯಲ್ಲಿ ಸೋಲಾರ್ ಬೇಲಿ ಅಳವಡಿಸಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಹೋರಾಟದಲ್ಲಿ ರೈತರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಯುವ ಕ್ರಾಂತಿ ಸಂಘಟನೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಗುಂಡುರಡ್ಡಿ ಕಮಲಾಪುರೆ ಮಾತನಾಡಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದಾರ, ರೈತ ಮುಖಂಡರಾದ ಅಶೋಕ ಕಾರಬರಿ, ವೀರರೆಡ್ಡಿ ಪಾಟೀಲ, ಖಾಸಿಂ ಅಲಿ, ಮುಕಿಮ್ ಮೋದಿನಾ ನಂದಗಾವ, ಖಾನಸಾಬ್ ನಾರಾಯಣಪುರ, ರುದ್ರಸ್ವಾಮಿ, ಸಂತೋಷಕುಮಾರ ಗುದಗೆ, ದೂಲಪ್ಪ ಆಣದೂರ, ಗಣಪತಿ ಕುಂಟೆ, ಸುಧಾಕರ ನಿರ್ಣಾ, ಪಾಂಡುರಂಗ ಬಸಿಲಾಪುರ, ಮಹೇಶ ನಿರ್ಣಾ, ರೇವಣಯ್ಯ ಸ್ವಾಮಿ, ಸಾಮಾಜಿಕ ಹೋರಾಟಗಾರ ಭೀಮರಡ್ಡಿ, ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕ ಪ್ರಭು ಸಂತೋಷಕರ, ಕಲ್ಯಾಣ ಕರ್ನಾಟಕ ವಿದ್ಯಾರ್ಥಿ ವೇದಿಕೆಯ ತಾಲೂಕು ಅಧ್ಯಕ್ಷ ಅರವಿಂದ ಜೋಗಿರೆ, ಯುವ ಕ್ರಾಂತಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಸಚಿನ್, ಮಲ್ಲರಡ್ಡಿ ಮುರಳ, ಸಂಗಮೇಶ ಬಿರಾದಾರ ಮೊಳಕೇರಾ ಇತರರಿದ್ದರು.
ರೈತರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರೈತ ಸಂಘದಿಂದ ರಾಷ್ಟ್ರೀಯ ಹೆದ್ದಾರಿ 65ರ ಆರ್ಟಿಒ ಚೆಕ್ಪೋಸ್ಟ್ ಸಮೀಪ ಹಮ್ಮಿಕೊಂಡಿರುವ ಸಂಚಾರ ತಡೆಗೆ ಯುವ ಕ್ರಾಂತಿ ಸಂಘಟನೆಯ ಸಂಪೂರ್ಣ ಬೆಂಬಲವಿದೆ ಎಂದು ಸಂಘಟನೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಗುಂಡುರಡ್ಡಿ ಕಮಲಾಪುರೆ ತಿಳಿಸಿದ್ದಾರೆ. ದೇಶದಲ್ಲಿ ಒಟ್ಟು ಜನಸಂಖ್ಯೆಯ ಬಹುಪಾಲು ರೈತಾಪಿ ವರ್ಗವನ್ನು ಅವಲಂಬಿಸಿದೆ. ರೈತರ ಸಮಸ್ಯೆಗಳು ದೇಶದ ಆರ್ಥಿಕತೆ ಹಾಗೂ ಜನಸಾಮಾನ್ಯರ ಬದುಕಿನ ಮೇಲೂ ಪರಿಣಾಮ ಬೀರುತ್ತವೆ. ಆದ್ದರಿಂದ ರೈತರ ಬೇಡಿಕೆಗಳನ್ನು ಸರ್ಕಾರಗಳು ರ್ನಿಲಕ್ಷಿಸಬಾರದು. ರೈತರ ಹಕ್ಕುಗಳನ್ನು ಪಡೆಯಲು ಸಂಘಟಿತ ಹೋರಾಟ ಅಗತ್ಯವಾಗಿದೆ. ಹೋರಾಟಕ್ಕೆ ಎಲ್ಲ ಸಂಘಟನೆಗಳು, ರೈತರು ಹಾಗೂ ಸಾರ್ವಜನಿಕರು ಬೆಂಬಲ ನೀಡಬೇಕು. ಒಗ್ಗಟ್ಟಿನಿಂದ ಧ್ವನಿ ಎತ್ತಿ ಸರ್ಕಾರಗಳ ಕಣ್ಣು ತೆರೆಸಬೇಕಾಗಿದೆ. ಆದ್ದರಿಂದ ಹೋರಾಟವನ್ನು ಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ.