ಬಸವಕಲ್ಯಾಣ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ವಿವೇಕವನ್ನು ಬಳಸಿಕೊಂಡು ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಂಡು ಹೋಗಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಪ್ರಲ್ಹಾದ ಚೆಂಗಟೆ ಹೇಳಿದರು.
ನಗರದ ಎಸ್ಎಸ್ಕೆ ಬಸವೇಶ್ವರ ಕಲಾ ವಿಜ್ಞಾನ ವಾಣಿಜ್ಯ ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಮಂಗಳವಾರ ಬಿ.ಎಸ್ಸಿ ವಿಭಾಗದಿಂದ ಆಯೋಜಿಸಿದ್ದ ಸಾಂಸತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನಸಿನ ಗುರಿಯ ಸಾಧನೆಗಾಗಿ ನಿರಂತರ ಪರಿಶ್ರಮ ವಹಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸಿ ಉನ್ನತ ಹುದ್ದೆಗಳನ್ನು ಪಡೆಯಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಸ್ಎಸ್ಕೆ ಕಾಲೇಜು ಪ್ರಾಚಾರ್ಯ ಡಾ. ಶಿವಕುಮಾರ ಪಾಟೀಲ ಮಾತನಾಡಿ, ಭಾರತೀಯ ಸಂಸತಿ ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯರ ಮೇಲೆ ಇದೆ. ಯಾವ ರೀತಿ ಸೈನಿಕರು ಯಾವುದೇ ಸ್ವಾರ್ಥವಿಲ್ಲದೆ ಗಡಿಯನ್ನು ಕಾಯುತ್ತಾರೆ ಅದೇ ರೀತಿ ನಾವು ದೇಶದೊಳಗೆ ನಮ್ಮ ಸಂಸತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ ಎಂದರು.
ನಿವೃತ್ತ ಹಿರಿಯ ಪ್ರಾಧ್ಯಾಪಕ ಆರ್.ಡಿ.ಬಾಲಿಕಿಲೆ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಡಾ.ವಿಜಯಕುಮಾರ ತಳವಾರ, ಎನ್ಎಸ್ಎಸ್ ಅಧಿಕಾರಿ ಡಾ.ಸುರೇಶ್ ಎಚ್.ಆರ್.ಇತರರಿದ್ದರು. ವಿದ್ಯಾರ್ಥಿ ರಾಮಲಿಂಗ ಸ್ವಾಗತಿಸಿದರು. ಜಯಶ್ರೀ ವಂದಿಸಿದರು. ಮನಿಷಾ ಪ್ರಾರ್ಥನಾ ಗೀತೆ ಹಾಡಿದರು.