ಬಸವಕಲ್ಯಾಣದ ಬಸವ ಮಹಾಮನೆ ಪರಿಸರದಲ್ಲಿ ಗುರುವಾರ 25ನೇ ವರ್ಷದ ಕಲ್ಯಾಣ ಪರ್ವ ರಜತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಶ್ರೀ ಮಹಾ ಜಗದ್ಗುರು ಮಾತೆ ಗಂಗಾದೇವಿ, ಬಸವರಾಜ ಬುಳ್ಳಾ, ಶಿವರಾಜ ನರಶೆಟ್ಟಿ, ಸೋಮಶೇಖರ ಪಾಟೀಲ ಗಾದಗಿ, ಜಯರಾಜ ಖಂಡ್ರೆ, ಸುರೇಶ ಸ್ವಾಮಿ, ಕೆ.ವಿರೇಶ, ಶಿವಶರಣಪ್ಪ ಹುಗ್ಗೆಪಾಟೀಲ, ರವೀಂದ್ರ ಕೊಳಕುರ, ಆಕಾಶ ಖಂಡಾಳೆ ಇತರರಿದ್ದರು. 
ಬೀದರ್

ಕಲ್ಯಾಣ ಪರ್ವ ರಜತ ಮಹೋತ್ಸವಕ್ಕೆ ಸಿದ್ಧತೆ

ಬಸವಕಲ್ಯಾಣ: ಬಸವ ಮಹಾಮನೆ ಪರಸರದಲ್ಲಿ 25ನೇ ವರ್ಷದ ಕಲ್ಯಾಣ ಪರ್ವ ರಜತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಯೋಜಿಸಲು ಅಗತ್ಯವಿರುವ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷರಾದ ಮಹಾ ಜಗದ್ಗುರು ಮಾತೆ ಗಂಗಾದೇವಿ ಹೇಳಿದರು.

ಗುರು ಬಸವಣ್ಣನವರ ನೇತೃತ್ವದಲ್ಲಿ ಹನ್ನೆರಡನೇ ಶತಮಾನದಲ್ಲಿ ನಡೆಯುತ್ತಿದ್ದ ಗಣಪರ್ವದ ಪ್ರತಿನಿಧಿಯೇ 21ನೇ ಶತಮಾನದಲ್ಲಿ ಆಚರಿಸಲಾಗುತ್ತಿರುವ ಕಲ್ಯಾಣ ಪರ್ವ. ಕಲ್ಯಾಣದ ಕ್ರಾಂತಿಯ ನಂತರ 1196ರಲ್ಲಿ ಗಣಪರ್ವ ನಿಂತು ಹೋಯಿತು. ಅಂದು ನಿಂತು ಹೋಗಿದ್ದ ಗಣಪರ್ವದ ಮಾದರಿಯಲ್ಲಿಯೇ ಲಿಂಗೈಕ್ಯ ಪೂಜ್ಯ ಡಾ.ಮಾತೆ ಮಹಾದೇವಿ ನೇತೃತ್ವದಲ್ಲಿ 2001ರಲ್ಲಿ ಸಮಾನತೆಯ ತತ್ವ ಲೋಕಕ್ಕೆ ತಿಳಿಸುವ ಉದ್ದೇಶದಿಂದ ಕಲ್ಯಾಣ ಪರ್ವವು ಆರಂಭಿಸಲಾಯಿತು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತಾಜಿ ಮಾಹಿತಿ ನೀಡಿದರು.

12ನೇ ಶತಮಾನದಲ್ಲಿ ಗುರು ಬಸವಣ್ಣನವರ ನೇತೃತ್ವದಲ್ಲಿ ವರ್ಷಕ್ಕೆ ಒಂದು ಸಲ ಬೃಹತ್​ ಪ್ರಮಾಣದಲ್ಲಿ ಗಣಪರ್ವ ನಡೆಯುತ್ತಿತ್ತು. ಲಕ್ಷಾಂತರ ಜನರನ್ನು ಅವರು ಒಂದೆಡೆ ಸೇರಿಸುತ್ತಿದ್ದರು. ಕಲ್ಯಾಣ ಕ್ರಾಂತಿ ನಂತರ ಅಂದು ನಿಂತು ಹೋಗಿದ್ದ ಗಣಪರ್ವವನ್ನು 21ನೇ ಶತಮಾನದಲ್ಲಿ ಕಲ್ಯಾಣ ಪರ್ವದ ಹೆಸರನಲ್ಲಿ ಆವರಿಸಿಕೊಂಡು ಬರಲಾಗುತ್ತಿದ್ದು, ಮೂರು ದಿನಗಳ ಕಾಲ ನಡೆಯುವ ಕಲ್ಯಾಣ ಪರ್ವದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು.

ಸ್ವಾಗತ ಸಮಿತಿ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಜಯರಾಜ ಖಂಡ್ರೆ, ಪ್ರಧಾನ ಕಾರ್ಯದರ್ಶಿ ಸುರೇಶ ಸ್ವಾಮಿ, ರಾಷ್ಟ್ರೀಯ ಬಸವ ದಳದ ರಾಜ್ಯಾಧ್ಯಕ್ಷ ಕೆ.ವೀರೇಶ, ಪ್ರಚಾರ ಸಮಿತಿ ಅಧ್ಯಕ್ಷ ಶಿವಶರಣಪ್ಪ ಹುಗ್ಗೆಪಾಟಿಲ, ತಾಲೂಕು ಅಧ್ಯಕ್ಷ ರವೀಂದ್ರ ಕೊಳಕುರ ಮಾತನಾಡಿದರು.

ಪೂಜ್ಯ ಡಾ.ಮಾತೆ ಗಂಗಾದೇವಿ ದಿವ್ಯ ಸಾನ್ನಿಧ್ಯದಲ್ಲಿ ಮೂರು ದಿನ ವಿವಿಧ ಕಾರ್ಯಕ್ರಮಗಳಿವೆ. ಅ.24ರಂದು ಬೆಳಗ್ಗೆ 10ಕ್ಕೆ ಸಂಗೀತ ನಿರ್ದೇಶಕ ಹಂಸಲೇಖ ಉದ್ಘಾಟಿಸಲಿದ್ದು, ಸಚಿವ ಈಶ್ವರ ಖಂಡ್ರೆ ಧ್ವಜಾರೋಹಣ ನೆರವೇರಿಸಲಿದ್ದು, ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 3.30ಕ್ಕೆ ರಾಷ್ಟ್ರೀಯ ಬಸವ ದಳದ ಸಮಾವೇಶ, ಸಂಜೆ 6.30ಕ್ಕೆ 12ನೇ ಶತಮಾನದ ಅನುಭವ ಮಂಟಪದಲ್ಲಿ ಮಹಿಳೆಯರ ಸ್ಥಾನ ವಿಷಯ ಕುರಿತು ಮಹಿಳಾ ಗೋಷ್ಠಿ ನಡೆಯಲಿದೆ ಎಂದು ತಿಳಿಸಿದರು.

25ರಂದು ಬೆಳಗ್ಗೆ 7ಕ್ಕೆ ಶರಣ ವಂದನೆ, 8ಕ್ಕೆ ಶೂನ್ಯ ಪೀಠಾರೋಹಣದ ವಾರ್ಷಿಕೋತ್ಸವ, 10ಕ್ಕೆ ಸಮಾಜ ಚಿಂತನಗೋಷ್ಠಿಯನ್ನು ಬೃಹತ್​ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್​ ಉದ್ಘಾಟಿಸುವರು. ಸಚಿವ ಸತೀಶ ಜಾರಕಿಹೊಳಿ ಧ್ವಜಾರೋಹಣ ನೆರವೇರಿಸುವರು. 26ರಂದು ಬೆಳಗ್ಗೆ ಬೆಳಗ್ಗೆ 10ಕ್ಕೆ ಕೋಟೆ ಆವರಣದಿಂದ ಬೆಳ್ಳಿ ರಥದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಹಾಗೂ ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಸಮಾರೋಪ ಜರುಗಲಿದೆ ಎಂದು ಮಾಹಿತಿ ನೀಡಿದರು.

ಪ್ರಮುಖರಾದ ಶಿವರಾಜ ನರಶೆಟ್ಟಿ, ಕಂಟೆಪ್ಪ ಗಂದಿಗುಡಿ, ಯೋಗೇಶ ಸಿರಿಗೇರಿ, ರಾಜೇಂದ್ರ ಚೊನ್ನಿಕೇರಿ, ಸಿದ್ದಯ್ಯ ಕೌಡಿಮಠ, ಗಣೇಶ ಬಿರಾದಾರ, ಪ್ರಕಾಶ ಜೀರ್ಗೆ, ಜಯಶ್ರೀ ಪಾಟೀಲ, ಜಗದೀಶ ಪಾಟೀಲ, ದತ್ತಾತ್ರಿ ರಾಘೊ ಇದ್ದರು.

ಕಲ್ಯಾಣ ಎಂದರೆ ಎಲ್ಲರ ಕಲ್ಯಾಣ. ಸಕಲ ಜೀವಾತ್ಮರ ಕಲ್ಯಾಣ. ಪರ್ವ ಎಂದರೆ ಹಬ್ಬ. 24 ವರ್ಷದಿಂದ ಕಲ್ಯಾಣ ಪರ್ವ ಆಚರಿಸಲಾಗುತ್ತಿದ್ದು, ಈಗ ರಜತ ಮಹೋತ್ಸವ ಆಚರಿಸುತ್ತಿರುವುದು ಈ ಸಲದ ವಿಶೇಷ.
> ಬಸವರಾಜ ಬುಳ್ಳಾ ಸ್ವಾಗತ ಸಮಿತಿ ಸಲಹೆಗಾರ