ಔರಾದ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಭವನದ ಕಾಮಗಾರಿ ಸ್ಥಳಕ್ಕೆ ಶಾಸಕ ಪ್ರಭು ಬಿ. ಚವ್ಹಾಣ ಭೇಟಿ ನೀಡಿ ಪರಿಶೀಲಿಸಿದರು. 
ಬೀದರ್

ಅಂಬೇಡ್ಕರ್ ಭವನ ಕಾಮಗಾರಿ ವೀಕ್ಷಿಸಿದ ಶಾಸಕ ಪ್ರಭು ಚವ್ಹಾಣ

ರೇವಣಸಿದ್ದಪ್ಪ ಪಾಟೀಲ್
ಔರಾದ: ಶಾಸಕ ಪ್ರಭು ಬಿ. ಚವ್ಹಾಣ ಅವರು ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಭವನದ ಕಾಮಗಾರಿ ಸ್ಥಳಕ್ಕೆ ಇತ್ತೀಚೆಗೆ ದಿಢೀರ್ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕಾಮಗಾರಿಯ ಗುಣಮಟ್ಟ ಹಾಗೂ ಪ್ರಗತಿ ಕುರಿತು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಂದ ಮಾಹಿತಿ ಪಡೆದ ಅವರು, ಕಟ್ಟಡ ನಿರ್ಮಾಣಕ್ಕೆ ಬಳಸುವ ಕಬ್ಬಿಣ, ಸಿಮೆಂಟ್ ಸೇರಿದಂತೆ ಎಲ್ಲ ಸಾಮಗ್ರಿಗಳು ಉತ್ತಮ ಗುಣಮಟ್ಟದ್ದಾಗಿರಬೇಕು. ಕಟ್ಟಡ ನಿರ್ಮಾಣ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಔರಾದ ಪಟ್ಟಣದಲ್ಲಿ ಸುಂದರ ಹಾಗೂ ಭವ್ಯವಾದ ಅಂಬೇಡ್ಕರ್ ಭವನ ನಿರ್ಮಾಣವಾಗಬೇಕು ಎಂಬುದು ನನ್ನ ಬಹಳ ವರ್ಷಗಳ ಕನಸಾಗಿತ್ತು. ಈ ಯೋಜನೆಗಾಗಿ ಈ ಹಿಂದೆ ಅನುದಾನ ಒದಗಿಸಿದ್ದೆ. ಆದರೆ ನಿವೇಶನ ಸಮಸ್ಯೆ ಹಾಗೂ ಇತರೆ ಕಾರಣಗಳಿಂದ ಮೂರು ಬಾರಿ ತೊಡಕಾಯಿತು. ಕೆಲವರು ಸಾಕಷ್ಟು ಅಡ್ಡಿಯುಂಟು ಮಾಡಿದ್ದರು. ಇದೀಗ ಎಲ್ಲ ಅಡೆತಡೆಗಳನ್ನು ನಿವಾರಿಸಿ ಭವ್ಯ ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯ ಆರಂಭಗೊಂಡಿರುವುದು ಸಂತೋಷ ತಂದಿದೆ ಎಂದು ಅವರು ಹೇಳಿದರು.
ಅಂದಾಜು ಪತ್ರಿಕೆಯಲ್ಲಿ ನಮೂದಿಸಿರುವಂತೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಯಾವುದೇ ಹಂತದಲ್ಲೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು. ಕಾಮಗಾರಿಯಲ್ಲಿ ಲೋಪಗಳು ಕಂಡುಬಂದಲ್ಲಿ ಅಥವಾ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿರುವುದು ಗಮನಕ್ಕೆ ಬಂದಲ್ಲಿ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳು ಹಾಗೂ ಅವರ ಸಂದೇಶವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಈ ಭವನ ನಿರ್ಮಾಣವಾಗಬೇಕು. ಸಾರ್ವಜನಿಕರಿಗೆ ಅನುಕೂಲವಾಗುವ ಎಲ್ಲ ಮೂಲಸೌಕರ್ಯಗಳನ್ನು ಅಳವಡಿಸಿ ಮಾದರಿ ಕಟ್ಟಡವಾಗಿ ರೂಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ ಮುಂಗನಾಳ, ಸಚಿನ ರಾಠೋಡ, ಶ್ರೀನಿವಾಸ ಖೂಬಾ, ದಯಾನಂದ ಘೂಳೆ, ಪ್ರಕಾಶ ಅಲ್ಮಾಜೆ, ಬಸವರಾಜ ಹಳ್ಳೆ, ಕೇರಬಾ ಪವಾರ, ಗುಂಡಪ್ಪ ಮುಧಾಳೆ, ಅಂಬಾದಾಸ ನೇಳಗೆ, ಪ್ರಕಾಶ ಭಂಗಾರೆ, ಆನಂದ ದ್ಯಾಡೆ, ಎಂ.ಡಿ ಸಲಾವೋದ್ದೀನ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.