ಬೀದರ್‌ನಲ್ಲಿ ಆಯೋಜಿಸಿದ ನಾರದ ಜಯಂತ್ಯುತ್ಸವದಲ್ಲಿ ಕೃಷ್ಣ ಜೋಶಿ ಮಾತನಾಡಿದರು. ನಾಗೇಶ್ ಚಿನ್ನಾರಡ್ಡಿ, ಚನ್ನಬಸವ ಮೊಕ್ತೆದಾರ್ ಇದ್ದರು.
ಬೀದರ್: ಸಮಾಜಮುಖಿ ಸುದ್ದಿಗಳ ಪ್ರಸಾರಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಪ್ರಚಾರ ಪ್ರಮುಖ ಕೃಷ್ಣ ಜೋಶಿ ಹೇಳಿದರು.
ಕೇಶವ ಕಾರ್ಯ ಸಂವರ್ಧನ ಸಮಿತಿ ವತಿಯಿಂದ ನಗರದಲ್ಲಿ ಆಯೋಜಿಸಿದ ನಾರದ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿ, ತ್ರಿಲೋಕ ಸಂಚಾರಿಯಾಗಿದ್ದ ಮಹರ್ಷಿ ನಾರದರು ಲೋಕಕಲ್ಯಾಣಕ್ಕಾಗಿ ಎಲ್ಲೆಡೆ ಸುದ್ದಿಯನ್ನು ತಲುಪಿಸುವ ಕಾರ್ಯ ನಿರ್ವಹಿಸಿದ್ದರು. ಅವರು ಧರ್ಮ ಸಂಸ್ಥಾಪನೆಗಾಗಿ ಸತ್ಯಸುದ್ದಿಗಳನ್ನು ಹರಡುವ ಕಾರ್ಯ ಮಾಡುತ್ತಿದ್ದರು ಎಂದು ತಿಳಿಸಿದರು.
18 ಪುರಾಣಗಳಲ್ಲಿ ಒಂದಾದ ನಾರದ ಪುರಾಣದಲ್ಲಿ ಮಾಧ್ಯಮಗಳ ಜವಾಬ್ದಾರಿಗಳ ಕುರಿತು ಮಹತ್ವದ ವಿಚಾರಗಳು ಉಲ್ಲೇಖಗೊಂಡಿವೆ. ನಾರದರು ನೀಡಿದ ೮೪ ಭಕ್ತಿ ಸೂತ್ರಗಳಲ್ಲಿ ಸಮಾಜಕ್ಕೆ ಯಾವ ರೀತಿಯ ಸಂದೇಶಗಳನ್ನು ತಲುಪಿಸಬೇಕು ಎಂಬುದರ ಬಗ್ಗೆಯೂ ಸ್ಪಷ್ಟ ಮಾರ್ಗದರ್ಶನವಿದೆ ಎಂದು ವಿವರಿಸಿದರು.
ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಎಲ್ಲ ಕ್ಷೇತ್ರಗಳ ಮಾಹಿತಿಗಳು ಲಭ್ಯವಾಗುತ್ತವೆ. ಹೀಗಾಗಿ ಪ್ರಕೃತಿಗೆ ಪೂರಕವಾಗಿರುವ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ಸುದ್ದಿಗಳನ್ನು ಪ್ರಸಾರ ಮಾಡುವುದು ಇಂದಿನ ಮಾಧ್ಯಮಗಳ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಕಲಹ ಹುಟ್ಟಿಸುವ ಸುದ್ದಿಗಳ ಬದಲು ಜನರನ್ನು ಒಗ್ಗೂಡಿಸುವ ಮತ್ತು ಸಮಾಜಮುಖಿ ಚಿಂತನೆ ಬೆಳೆಸುವ ಸುದ್ದಿಗಳಿಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಪತ್ರಕರ್ತ ಚನ್ನಬಸವ ಮೊಕ್ತೆದಾರ್ ಮಾತನಾಡಿದರು. ನಾಗೇಶ್ ಚಿನ್ನಾರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಹನುಮಂತರಾವ ಪಾಟೀಲ್, ವಿಜಯ ಮಹಾಂತೇಶ್ ಇತರರಿದ್ದರು. ಶಿವಕಾಂತ್ ಪಾಟೀಲ್ ನಿರೂಪಣೆ ಮಾಡಿದರು. ಸತೀಶ್ ಪಾಂಚಾಳ ಸ್ವಾಗತಿದರು. ಎನ್. ಕೃಷ್ಣಾರಡ್ಡಿ ವಂದಿಸಿದರು.