ಔರಾದ್ ತಾಲೂಕಿನ ಹೆಡಗಾಪುರದಲ್ಲಿ ನಿರ್ಮಿಸಲಾಗುತ್ತಿರುವ ಜಾನುವಾರು ತಳಿ ಸಂವರ್ಧನಾ ಕೇಂದ್ರದ ಕಾಮಗಾರಿಯನ್ನು ಶಾಸಕ ಪ್ರಭು ಚವ್ಹಾಣ್ ವೀಕ್ಷಿಸಿದರು. ವಿಜಯಕುಮಾರ, ಶಶಿಕುಮಾರ ಇತರರಿದ್ದರು. 
ಬೀದರ್

ಕಾಮಗಾರಿ ಕಳಪೆಯಾದರೆ ಗುತ್ತಿಗೆದಾರ ಕಪ್ಪು ಪಟ್ಟಿಗೆ

ಔರಾದ್: ಹೆಡಗಾಪುರ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಕಾಮಗಾರಿಯ ಕುರಿತು ಸಾರ್ವಜನಿಕರಿಂದ ಸಾಕಷ್ಟು ದೂರು ಬರುತ್ತಿರುವೆ. ಒಂದು ವೇಳೆ ಕಾಮಗಾರಿ ಕಳಪೆ ಕಂಡುಬAದರೆ ಸಂಬಂಧಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಶಾಸಕ ಪ್ರಭು ಚವ್ಹಾಣ್​ ಹೇಳಿದರು.
ತಾಲೂಕಿನ ಹೆಡಗಾಪುರದಲ್ಲಿ ಜಾನುವಾರು ತಳಿ ತರಬೇತಿ ಕೇಂದ್ರದ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ನಿರ್ಮಾಣ ಹಂತದಲ್ಲಿರುವ ರೈತರ ತರಬೇತಿ ಕೇಂದ್ರ, ಜಾನುವಾರು ತಳಿಗಳ ಸಂವರ್ಧನಾ ಕೇಂದ್ರ, ಕೋಳಿ ಸಂವರ್ಧನಾ ಕೇಂದ್ರ ಸೇರಿದಂತೆ ವಿವಿಧ ಕಟ್ಟಡಗಳನ್ನು ವೀಕ್ಷಿಸಿ, ಕ್ಯೂರಿಂಗ್ ಸರಿಯಾಗಿ ಮಾಡುತ್ತಿಲ್ಲ. ಕಡಿಮೆ ದರ್ಜೆಯ ಸಿಮೆಂಟ್ ಬಳಕೆ ಮಾಡುತ್ತಿದ್ದಾರೆ. ಕೆಲಸ ಸಂಪೂರ್ಣ ಕಳಪೆಯಾಗುತ್ತಿದೆ ಎಂದು ಸ್ಥಳೀಯರಿಂದ ನಿರಂತರವಾಗಿ ದೂರುಗಳು ಬರುತ್ತಿವೆ. ಹೀಗಾಗಿ ನಾನು ಖುದ್ದಾಗಿ ಭೇಟಿ ನೀಡಿದ್ದೇನೆ. ಇದೇ ರೀತಿ ಮುಂದುವರಿದರೆ ಸರಿಯಲ್ಲ. ಕಾಮಗಾರಿ ಕಳಪೆಯಾದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕಾಗುತ್ತದೆ ಎಂದು ಚವ್ಹಾಣ್ ಎಚ್ಚರಿಕೆ ನೀಡಿದರು.
ಜಿಲ್ಲೆಯ ಜಾನುವಾರು ಸಾಕಾಣಿಕೆಯಲ್ಲಿ ತೊಡಗಿರುವ ರೈತರು ವೈಜ್ಞಾನಿಕತೆ ಅಳವಡಿಸಿಕೊಂಡು ಹೆಚ್ಚಿನ ಲಾಭ ಪಡೆಯುವಂತಾಗಬೇಕು. ನಮ್ಮ ಭಾಗದ ರೈತರು ಕೂಡ ಉದ್ಯಮಿಗಳ ರೀತಿಯಲ್ಲಿ ಬದಲಾಗಬೇಕು ಎಂಬ ಕನಸಿದೆ. ಈ ದಿಶೆಯಲ್ಲಿ ನಾನು ಪಶು ಸಂಗೋಪನೆ ಸಚಿವನಾಗಿದ್ದಾಗ ಕಲ್ಯಾಣ ಕರ್ನಾಟಕದಲ್ಲೇ ಮೊದಲ ಬಾರಿಗೆ ೩೪.೪೯ ಕೋಟಿ ರೂ.ವೆಚ್ಚದ ಜಾನುವಾರು ತಳಿ ಸಂವರ್ಧನಾ ಮತ್ತು ರೈತರ ತರಬೇತಿ ಕೇಂದ್ರವನ್ನು ಕ್ಷೇತ್ರಕ್ಕೆ ಮಂಜೂರು ಮಾಡಿಸಿದದೇನೆ ಎಂದರು.
ಇದು ನನ್ನ ಕನಸಿನ ಯೋಜನೆಯಾಗಿದೆ ಜತೆಗೆ ರೈತರಿಗೆ ಅನುಕೂಲಕರವಾದ ಕಾಮಗಾರಿ ಇದಾಗಿರುವುದರಿಂದ ಗುಣಮಟ್ಟದ ವಿಷಯದಲ್ಲಿ ಯಾವುದೇ ರೀತಿಯ ರಾಜಿಗೆ ಆಸ್ಪದ ನೀಡುವುದಿಲ್ಲ. ಉತ್ತಮ ಗುಣಮಟ್ಟದ ಸಿಮೆಂಟ್ ಹಾಗೂ ಮತ್ತಿತರೆ ಉಪಕರಣಗಳನ್ನು ಬಳಸಬೇಕು. ಕ್ಯೂರಿಂಗ್ ಸರಿಯಾಗಿ ಆಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅಧಿಕಾರಿಗಳು ಗುತ್ತಿಗೆದಾರರಿಗೆ ಕೆಲಸ ವಹಿಸಿ ಕಚೇರಿಯಲ್ಲಿ ಕುಳಿತುಕೊಂಡರೆ ನಡೆಯುವುದಿಲ್ಲ. ಅನುಷ್ಠಾನ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಸ್ಥಳದಲ್ಲಿದ್ದು ಕೆಲಸ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು. ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಸಹ ಆಗಾಗ್ಗೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೆಲಸದ ಮೇಲೆ ನಿಗಾ ವಹಿಸಬೇಕು. ಮತ್ತು ಅಗತ್ಯ ಸಲಹೆಮ ಸೂಚನೆ ನೀಡಬೇಕು ಎಂದು ತಿಳಿಸಿದರು.
ಗೃಹ ಮಂಡಳಿ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಶಿಕುಮಾರ, ಮುಖಂಡರಾದ ಶಿವಾಜಿರಾವ ಪಾಟೀಲ್ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಶ್ರೀಮಂತ ಪಾಟೀಲ್, ಶಿವಾಜಿರಾವ ಕಾಳೆ, ಸಚಿನ್ ರಾಠೋಡ್, ಕೇರಬಾ ಪವಾರ್, ಶಿವರಾಜ ಅಲ್ಮಾಜೆ, ರಾಜಕುಮಾರ ಸೋರಾಳೆ, ಶಿವಲಿಂಗ ಚಿಟ್ಟಾ, ಶಿವಕುಮಾರ ಪಾಂಚಾಳ, ನಾಗಶೆಟ್ಟಿ ಗಾದಗೆ, ಅನೀಲ ಮುಸ್ತಾಪುರ, ಮನೋಹರ ಬೋಗಾರ, ಹಣಮಂತ ಯರನಳ್ಳೆ, ಬಸವರಾಜ ಗಂಜೆ ಇತರರಿದ್ದರು.