ಎಳ್ಳಮಾವಾಸ್ಯೆ ನಿಮಿತ್ತ ಔರಾದ್ ತಾಲೂಕಿನ ಹಕ್ಯಾಳದಲ್ಲಿ ಶಾಸಕ ಪ್ರಭು ಚವ್ಹಾಣ್ ಜೋಕಾಲಿ ಆಡಿ ಸಂಭ್ರಮಿಸಿದರು.
ಔರಾದ್: ಶಾಸಕ ಪ್ರಭು ಚವ್ಹಾಣ್ ಅವರು ಶುಕ್ರವಾರ ರೈತರೊಂದಿಗೆ ಎಳ್ಳಮವಾಸ್ಯೆ ಹಬ್ಬವನ್ನು ಆಚರಿಸಿದರು. ಸ್ವಗ್ರಾಮ ಬೊಂತಿ ತಾಂಡಾದಲ್ಲಿನ ಕೃ ಜಮೀನಿಗೆ ತೆರಳಿ ಪೂಜೆ ನೆರವೇರಿಸಿ, ಚರಗ ಚಲ್ಲುವ ಮೂಲಕ ಭೂತಾಯಿಗೆ ನಮನ ಸಲ್ಲಿಸಿದರು. ಈ ಹಬ್ಬ ರೈತರ ಜೀವನದಲ್ಲಿ ಸಮೃದ್ಧ ತರಲಿ ಎಂದು ಚವ್ಹಾಣ್ ದೇವರಲ್ಲಿ ಪ್ರಾರ್ಥಿಸಿದರು. ಗ್ರಾಮಸ್ಥರು, ಮುಖಂಡರೊಂದಿಗೆ ಕುಳಿತು ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಭಜ್ಜಿ, ಶೇಂಗಾ-ಎಳ್ಳಿನ ಹೋಳಿಗೆಯನ್ನು ಸೇವಿಸಿದರು. ಇದೇ ವೇಳೆ ಶಾಸಕರು ಜೋಕಾಲಿಯಾಡಿ ಖುಷಿ ಪಟ್ಟರು.
ನಂತರ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ರೈತರೊಂದಿಗೆ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು. ದಾಬಕಾ, ಮಾಳೆಗಾಂವ, ಹಕ್ಯಾಳ, ಕಮಲನಗರ, ಹೊಳಸಮುದ್ರ, ಹಲ್ಲಾಳಿ, ಠಾಣಾಕುಶನೂರ, ಮುಧೋಳ, ಡೊಂಗರಗಾಂವ ಸೇರಿದಂತೆ ವಿವಿಧ ಹಳ್ಳಿಗಳಿಗೆ ತೆರಳಿ ಕಾರ್ಯಕರ್ತರ ಹೊಲಗಳಿಗೆ ಭೇಟಿ ನೀಡಿದರು.
ರೈತರ ಏಳಿಗೆ ದೇಶದ ಅಭಿವೃದ್ಧಿಗೆ ಅಡಿಪಾಯವಾಗಿರುತ್ತದೆ. ನಮ್ಮೆಲ್ಲರಿಗೆ ಅನ್ನ ನೀಡಿ ಪೋಷಿಸುವ ರೈತರ ಹಿತ ಕಾಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ದಿಶೆಯಲ್ಲಿ ನಾನು ನಿರಂತರ ಶ್ರಮ ವಹಿಸುತ್ತಿದ್ದು, ರೈತರ ಹಿತದೃಷ್ಟಿಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದ್ದೇನೆ. ರೈತರಿಗೆ ಸಂಕಷ್ಟಗಳು ಬಂದಾಗ ಮುಂದೆ ನಿಂತು ಹೋರಾಡುತ್ತಿದ್ದೇನೆ. ರೈತರು ಕೂಡ ಕೃಷಿಯಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಲು ಯತ್ನಿಸಬೇಕು ಎಂದು ಹೇಳಿದರು.
ಮುಖಂಡರಾದ ಮಾರುತಿ ಚವ್ಹಾಣ್, ರಾಮಶೆಟ್ಟಿ ಪನ್ನಾಳೆ, ಶಿವಾನಂದ ವಡ್ಡೆ, ನಾಗೇಶ ಪತ್ರೆ, ಪ್ರತೀಕ ಚವ್ಹಾಣ್, ಯೋಗೇಶ ಪಾಟೀಲ್, ನಾಗನಾಥ ಚಿಕ್ಲೆ, ಭರತ ಕದಂ, ಬಂಟಿ ರಾಂಪುರೆ, ನೀಲಕಂಠ ಪಾಟೀಲ್, ಪ್ರವೀಣ ಕಾರಬಾರಿ, ಅಶೋಕ ಮೇತ್ರೆ, ಪ್ರದೀಪ್ ಪವಾರ್, ಧನಾಜಿ ರಾಠೋಡ್, ಸುಭಾಷ ಸರ್ಪಂಚ್, ಬಾಬುರಾವ ರಾಠೋಡ್, ವಿಲಾಸ ಚವ್ಹಾಣ್, ದೀಪಕ್ ಜಾಧವ್ ಇತರರಿದ್ದರು.
ಈ ಭಾಗದಲ್ಲಿ ರೈತರು ಆಚರಿಸುವ ದೊಡ್ಡ ಹಬ್ಬಗಳಲ್ಲಿ ಎಳ್ಳಮವಾಸ್ಯೆ ಪ್ರಮುಖ. ಎಲ್ಲ ರೈತರು ತಮ್ಮ ಹೊಲಗಳಿಗೆ ತೆರಳಿ ಭೂತಾಯಿಗೆ ಪೂಜೆ ಸಲ್ಲಿಸಿ ಕುಟುಂಬದವರೊಂದಿಗೆ ಸಹಭೋಜನ ಮಾಡುವ ಅಪರೂಪದ ಹಬ್ಬ ಇದಾಗಿದೆ.