ಬಸವಕಲ್ಯಾಣ: ನಾಡಿನ ಶರಣ ಪರಂಪರೆಯ ಮಠ ಮತ್ತು ಮಠಾಧೀಶರ ಕೊಡುಗೆಗಳನ್ನು ಚರಿತ್ರೆಯ ರೂಪದಲ್ಲಿ ರಂಗಕ್ಕೆ ತಂದ ಶ್ರೇಯಸ್ಸು ಎಲ್.ಬಿ.ಕೆ.ಆಲ್ದಾಳ್ರಿಗೆ ಸಲ್ಲುತ್ತದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಕಲಬುರಗಿಯ ಎಲ್ಬಿಕೆ ಆಲ್ದಾಳ್ ಟ್ರಸ್ಟ್ನಿಂದ ಸೋಮವಾರ ಆಯೋಜಿಸಿದ್ದ 2026ನೇ ಸಾಲಿನ ರಾಜ್ಯಮಟ್ಟದ ರಂಗಸಂತ ಜಂಗಮ ಎಲ್ಬಿಕೆ. ಆಲ್ದಾಳ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಶ್ರೀಗಳು, ನಾಟಕಕಾರ, ತತ್ವ ಪದಕಾರ ಹಾಗೂ ಶ್ರೇಷ್ಠ ರಂಗಕರ್ಮಿ ಆಲ್ದಾಳ್ ಅವರ ಕೊಡುಗೆ ಅನನ್ಯ ಎಂದು ಬಣ್ಣಿಸಿದರು.
ಆಲ್ದಾಳರು ನಮ್ಮ ಮಠದ ಪರಮಭಕ್ತರು. ಅವರು ಜಾತ್ಯಾತಿತರಾಗಿ, ಧಮಾರ್ತೀತರಾಗಿ ವಿವಿಧ ಮಠ ಮತ್ತು ಮಠಾಧೀಶರ ಜೀವನ, ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಗಳ ಕುರಿತು ಅಧ್ಯಯನ ಮಾಡಿ, ನಾಟಕ ರಚನೆ ಮಾಡಿ ಲಕ್ಷಾಂತರ ಜನರು ನೋಡುವಂತೆ ಮಾಡಿದ್ದರು. ಅಂತಹ ಮೇರುಕಲಾವಿದರ ಗೌರವಾರ್ಥ ಟ್ರಸ್ಟ್ ರಚನೆ ಮಾಡಿ, ಪ್ರಶಸ್ತಿ ಕೊಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು..
ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ.ಶೇಕ್ ಮಾಸ್ತರ್ ಮಾತನಾಡಿ, ಎಲ್.ಬಿ.ಕೆ.ಆಲ್ದಾಳ ಅವರ ಸ್ಮರಣಾರ್ಥ ಟ್ರಸ್ಟ್ ರಚಿಸಿ, ಅವರ ಹೆಸರಿನಲ್ಲಿ ರಂಗ ಸಾಧಕರಿಗೆ ಪ್ರಶಸ್ತಿ ಕೊಡಬೇಕು ಎಂದು ನಿರ್ಧರಿಸಿ, ಹಾರಕೂಡದ ಪೂಜ್ಯರಿಗೆ ತಿಳಿಸಿದಾಗ ತುಂಬ ಸಂತೋಷ ಪಟ್ಟರಲ್ಲದೇ ಸ್ವತಃ ತಾವೇ ಕಲಬುರಗಿಗೆ ಆಗಮಿಸಿ ಟ್ರಸ್ಟ್ ಉದ್ಘಾಟಿಸಿದ್ದರು. ಮೂರು ವರ್ಷಗಳ ಕಾಲ ಹಾರಕೂಡದ ಶ್ರೀಮಠದಲ್ಲಿಯೇ ಟ್ರಸ್ಟ್ ಮೂಲಕ ಕೊಡಮಾಡುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಲು ವ್ಯವಸ್ಥೆ ಮಾಡಿದ್ದಾರೆ ಎಂದರು.
ಎಲ್.ಬಿ.ಕೆ. ಆಲ್ದಾಳ್ ಟ್ರಸ್ಟ್ನ ಅಧ್ಯಕ್ಷ ಶಿವಯ್ಯಸ್ವಾಮಿ ಮಠಪತಿ ಬಿಬ್ಬಳ್ಳಿ ಮಾತನಾಡಿದರು. ಸಿದ್ರಾಮಪ್ಪ ಗುದಗೆ, ಸಿದ್ದಣಗೌಡ ಶೆಟ್ಟಿ, ಗುರಪ್ಪ ಪಾಟೀಲ ನಂದೂರ, ರೇವಣಸಿದ್ದಪ್ಪ ಬಡಾ, ಶಾಮರಾವ ಕೊರವಿ, ಡಾ.ನರಸಮ್ಮ ಆವಂಟಿ, ಬಸವರಾಜ ಐನೋಳಿ, ಶಿವಣ್ಣ ಹಿಟ್ಟಿನ ಹಲಕರ್ಟಿ, ನಾಗರಾಜ ರೇಶ್ಮಿ, ಸಂಗಣ್ಣ ಅಲ್ದಿ, ಟ್ರಸ್ಟ್ ಪದಾಧಿಕಾರಿಗಳಾದ ಸೂರ್ಯಕಾಂತ ಮಾಸ್ಟರ್ ಹಂಗನಳ್ಳಿ, ಸೋಮಶೇಖರ ಪಾಟೀಲ ಮಲಕೂಡ, ಚಂದ್ರಶೇಖರ ಕರ್ಜಗಿ, ಶಿವರಾಜ ಪಾಟೀಲ, ರವಿ ಹಿರೇಮಠ ಇದ್ದರು.
ಆಲ್ದಾಳ್ ಟ್ರಸ್ಟ್ ಸದಸ್ಯ ಪ್ರಭಾಕರ ಜೋಶಿ ಸ್ವಾಗತಿಸಿದರು. ಟ್ರಸ್ಟ್ ಕಾರ್ಯದರ್ಶಿ ಶಂಕರ ಹಿಪ್ಪರಗಿ ಚಿಂಚೋಳಿ ವಂದಿಸಿದರು. ಸಹಕಾರ್ಯದರ್ಶಿ ಬಿ.ಎಚ್.ನಿರಗುಡಿ ನಿರೂಪಣೆ ಮಾಡಿದರು. ಸಮೀರ್ ಬಿ.ಶೇಖ್ ಗಾಯನ ನಡೆಸಿಕೊಟ್ಟರು. ಕಾರ್ತಿಕ ಸ್ವಾಮಿ ಯಲದಗುಂಡಿ, ತನ್ವೀರ್ ಬಿ. ಶೇಖ್, ರೇವಣಸಿದ್ದಪ್ಪ ಹೂಗಾರ, ಶರಣಪ್ಪ ಜಮಾದಾರ ಸಂಗೀತ ಸೇವೆ ಸಲ್ಲಿಸಿದರು. ಪ್ರಶಸ್ತಿ ಪುರಸತರಾದ ವಿಶ್ವನಾಥ ಮಾಸ್ತರ್ ಬೆಳಗುಂಪಾ ಮತ್ತು ಬಸವರಾಜ ಪಂಚಗಲ್ ತಮ್ಮ ಕಲಾಪ್ರತಿಭೆಯ ಪ್ರದರ್ಶನ ಮಾಡಿದರು.