ರಜೆ ಅವಧಿಯಲ್ಲಿ ಸಮೀಕ್ಷಾ ಕಾರ್ಯ ಕೈಗೊಂಡ ಜಿಲ್ಲೆಯ ಪ್ರೌಢಶಾಲಾ ಸಹ ಶಿಕ್ಷಕರಿಗೆ ಗಳಿಕೆ ರಜೆ ಹಾಗೂ ಗೌರವ ಧನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಬೀದರ್‍ನಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು 
ಬೀದರ್

ಗಳಿಕೆ ರಜೆ, ಗೌರವ ಧನ ಮಂಜೂರಾತಿಗೆ ಆಗ್ರಹ

ಬೀದರ್: ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಾಗೂ ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆ ಕೈಗೊಂಡ ಪ್ರೌಢಶಾಲಾ ಶಿಕ್ಷಕರಿಗೆ ಗಳಿಕೆ ರಜೆ ಹಾಗೂ ಗೌರವ ಧನ ಮಂಜೂರು ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ.
ಸಂಘದ ಪದಾಧಿಕಾರಿಗಳು ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ಅವರ ನೇತೃತ್ವದಲ್ಲಿ ನಗರದಲ್ಲಿ ನಿಯೋಗದಲ್ಲಿ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಜಿಲ್ಲೆಯ ಶಿಕ್ಷಕರು ರಜೆ ಅವಧಿಯಲ್ಲಿ ಎರಡೂ ಸಮೀಕ್ಷೆ ನಡೆಸಿದ್ದಾರೆ. ಆದರೆ, ನಿಯಮಾನುಸಾರ ಈವರೆಗೆ ಗಳಿಕೆ ರಜೆ ಹಾಗೂ ಗೌರವ ಧನ ನೀಡಲಾಗಿಲ್ಲ ಎಂದು ಅಳಲು ತೋಡಿಕೊಂಡರು.
ಕೂಡಲೇ ಗಳಿಕೆ ರಜೆಗಾಗಿ ಹಾಜರಾತಿ ಪತ್ರ ನೀಡಲು ಹಾಗೂ ಗೌರವ ಧನ ಮಂಜೂರು ಮಾಡಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಬೇಡಿಕೆ ಮಂಡಿಸಿದರು.
ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಸೂರ್ಯಕಾಂತ ಸಿಂಗೆ, ಪ್ರಧಾನ ಕಾರ್ಯದರ್ಶಿ ಬಳವಂತರಾವ್ ರಾಠೋಡ್, ತಾಲ್ಲೂಕು ಅಧ್ಯಕ್ಷ ವೈಜಿನಾಥ ಸಾಳೆ, ಚಂದ್ರಕಾಂತ ಚಿಕ್ಕಲೆ, ವಸಂತ ಆಡೆ, ಶಿವಾನಂದ ಕುಂಬಾರ, ಶಾಂತಕುಮಾರ ಹುಮನಾಬಾದೆ ಇದ್ದರು.