ಹುಮನಾಬಾದ್​ ತಾಲೂಕಿನ ದುಬಲಗುಂಡಿಯ ಸಂಗಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಸಂಸ್ಥೆ ಅಧ್ಯಕ್ಷ ಸುಭಾಷ ಗಂಗಾ ಉದ್ಘಾಟಿಸಿದರು. ಶ್ರೀಕಾಂತ ಸೂಗಿ, ಶೈಲೇಂದ್ರ ಕಾವಡಿ, ಪರಮೇಶ್ವರ ಇತರರಿದ್ದರು. 
ಬೀದರ್

ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರ ನೀಡಿ

ಹುಮನಾಬಾದ್​: ಮಕ್ಕಳು ದೇಶದ ಅಮೂಲ್ಯ ಸಂಪತ್ತು. ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳನ್ನು ಕಲಿಸಿ ಸುಸಂಸತ ನಾಗರಿಕರನ್ನಾಗಿ ರೂಪಿಸಲು ಪ್ರತಿಯೊಬ್ಬರೂ ವಿಶೇಷ ಕಾಳಜಿ ವಹಿಸಬೇಕು ಎಂದು ದುಬಲಗುಂಡಿ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಷ ಗಂಗಾ ಹೇಳಿದರು.

ತಾಲೂಕಿನ ದುಬಲಗುಂಡಿ ಗ್ರಾಮದ ಸಂಗಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 62ನೇ ರಾಷ್ಟ್ರೀಯ ಮಕ್ಕಳ ದಿನಾಚರಣೆ, ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಹಾಗೂ ಮೊಬೈಲ್​ ಬಿಡಿ, ಪುಸ್ತಕ ಹಿಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಸಂಗಮೇಶ್ವರ ಶಿಕ್ಷಣ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದ್ದು, ಎಲ್ಲರೂ ಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಕಾಳಜಿ ಮೆರೆಯಬೇಕು. ಮುಂದಿನ ಶೈಕ್ಷಣಿಕ ವರ್ಷದಿಂದ ಸಂಸ್ಥೆಯಲ್ಲಿ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಮನೆಯಂಗಳದಲ್ಲಿ ತಮ್ಮ ಹೆಸರಿನಲ್ಲಿ ಕಡ್ಡಾಯವಾಗಿ ಒಂದು ಸಸಿ ನೆಡಬೇಕು. ಉತ್ತಮವಾಗಿ ಸಸಿ ಬೆಳೆಸುವ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀಕಾಂತ ಸೂಗಿ ಮಾತನಾಡಿ, ಇಂದಿನ ಮಕ್ಕಳು ಮೊಬೈಲ್​ ಬಳಕೆಗೆ ಹೆಚ್ಚು ಅಂಟಿಕೊಂಡಿದ್ದಾರೆ. ಮೊಬೈಲ್​ ವ್ಯಸನದಿಂದ ದೂರವಿದ್ದು, ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕನ್ನಡ ಸಾಹಿತ್ಯ ಪರಿಷತ್​ "ಮೊಬೈಲ್​ ಬಿಡಿ, ಪುಸ್ತಕ ಹಿಡಿ' ಎಂಬ ಅಭಿಯಾನ ಆರಂಭಿಸಿದ್ದು, ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಮೂಡಿಸುವುದು ಇದರ ಉದ್ದೇಶವಾಗಿದೆ ಎಂದರು.

ಪರಿಸರವಾದಿ ಶೈಲೇಂದ್ರ ಕಾವಡಿ, ಶಾಲೆಯ ಮುಖ್ಯಗುರು ಪರಮೇಶ್ವರ, ಸವಿತಾ, ಅಕ್ಕಮಹಾದೇವಿ, ಕವಿತಾ, ಗುಂಡಯ್ಯ ಸ್ವಾಮಿ, ರಾಹುಲ್​ ಚಾಂದಿ ಇತರರಿದ್ದರು. ಶಿವು ಪವಾರ ಸ್ವಾಗತಿಸಿದರು.ರಾಹುಲ್​ ಚಾಂದಿ ನಿರೂಪಣೆ ಮಾಡಿದರು. ವಿನೋದ ವಂದಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್​ನಿಂದ ಸನ್ಮಾನಿಸಲಾಯಿತು.