ಬಸವಕಲ್ಯಾಣದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಟ್ಟಡದ ಉದ್ಘಾಟನೆ ಹಾಗೂ ಶಿವರಾತ್ರಿ ನಿಮಿತ್ತ ಇಷ್ಟಲಿಂಗ ಮಹಾಪೂಜೆ ಸಮಾರಂಭವನ್ನು ಶ್ರೀ ಡಾ.ಚನ್ನವೀರ ಶಿವಾಚಾರ್ಯ ಉದ್ಘಾಟಿಸಿದರು. ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ, ಶ್ರೀ ಪ್ರಭುದೇವ ಸ್ವಾಮೀಜಿ, ಶ್ರೀ ಶಿವಲಿಂಗ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಸಚಿವ ಈಶ್ವರ ಖಂಡ್ರೆ, ಶಾಸಕ ಶರಣು ಸಲಗರ, ಬಸವರಾಜ ಕೋರಕೆ, ಶಶಿಕಾಂತ ದುರ್ಗೆ, ವಿವೇಕ ಹೊದಲೂರೆ, ಮಲ್ಲಿಕಾರ್ಜುನ ಗುಂಗೆ ಇತರರಿದ್ದರು.
ಬಸವಕಲ್ಯಾಣ: ದಿವ್ಯ ಶಕ್ತಿಯ ಇಷ್ಟಲಿಂಗ ಪೂಜೆಯನ್ನು ನಿತ್ಯ ಮಾಡಬೇಕು ಎಂದು ಹಾರಕೂಡ ಸಂಸ್ಥಾನ ಹಿರೇಮಠ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯ ನುಡಿದರು.
ನಗರದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಟ್ಟಡದ ಉದ್ಘಾಟನೆ ಸಮಾರಂಭ ಹಾಗೂ ಮಹಾ ಶಿವರಾತ್ರಿ ಇಷ್ಟಲಿಂಗ ಮಹಾಪೂಜೆ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಬಸವೇಶ್ವರ ದೇವಸ್ಥಾನದ ಮಹಾದ್ವಾರ ಉದ್ಘಾಟಿಸಲಾಗಿದೆ. ಇದು ಕಟ್ಟಡದ ಉದ್ಘಾಟನೆ ಮಾತ್ರವಲ್ಲ, ಎಲ್ಲ ಶ್ರದ್ಧಾ ಕೇಂದ್ರಗಳ ದಿವ್ಯ ಶಕ್ತಿ ಇಲ್ಲಿದೆ. ಇಡೀ ವಿಶ್ವಕ್ಕೆ ವಚನ ಸಾಹಿತ್ಯದ ಮೂಲಕ ದಿವ್ಯ ಸಂದೇಶ ನೀಡಿದ ಮಹಾತ್ಮ ಬಸವೇಶ್ವರ ಸಂದೇಶದ ಉದ್ಘಾಟನೆ ಆದಂತೆ ಎಂದು ಬಣ್ಣಿಸಿದರು.
ಇಷ್ಟಲಿಂಗ ಪೂಜೆಯಿಂದ ಚಿರಶಾಂತಿ ಕಾಣಲು ಸಾಧ್ಯ. ಶರಣರಿಗೆ ಒಂದ್ಸಲ ಶರಣು ಶರಣಾರ್ಥಿ ಎಂದರೆ ಕೋಟಿ ಲಿಂಗ ದರ್ಶನ ಮಾಡಿದಂತೆ ಎಂದು ಅಲ್ಲಮಪ್ರಭುಗಳು ಹೇಳುತ್ತಾರೆ. ನಿಜವಾದ ಸತ್ಯ, ಶುದ್ಧ ಕಾಯಕ ಮಾಡುವ ಭಕ್ತರ ಹೃದಯ ಮಂದಿರದಲ್ಲಿ ದೇವರು ನೆಲೆಸಿರುತ್ತಾನೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರೂ ಆದ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಕಲ್ಯಾಣದ ಕ್ರಾಂತಿ ಜಗತ್ತಿನ ಇತಿಹಾಸದಲ್ಲೇ ವಿಶಿಷ್ಟವಾದದ್ದು. ಸರ್ವ ಸಮಾನತೆಗಾಗಿ ಸಮಾಜೋಧಾರ್ಮಿಕ ಕ್ರಾಂತಿ ನಡೆದ ನೆಲ ಕಲ್ಯಾಣ. ಸಲಕ ಜೀವಾತ್ಮರಿಗೆ ಲೇಸು ಬಯಸಿದ ಬಸವಾದಿ ಶರಣುರು ನಮಗೆಲ್ಲ ತತತ್ವಾದರ್ಶ, ಕಾಯಕ, ದಾಸೋಹ ಸಿದ್ಧಾಂತ ನೀಡಿದ್ದಾರೆ. ಸತ್ಯ, ಶುದ್ಧ ಕಾಯಕದಿಂದ ಬಂದಿರುವ ಆದಾಯದಲ್ಲಿ ಬೇಕಾದಷ್ಟೇ ಬಳಸಿ ಉಳಿದದ್ದನ್ನು ಸಮಾಜಕ್ಕೆ ವಿನಿಯೋಗಿಸಲು ಹೇಳಿಕೊಟ್ಟಿದ್ದಾರೆ. ಈ ತತ್ವ ಅನುಸರಿಸಿದರೆ ಸಮಾನತೆ, ಸೌಹಾರ್ದ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ ಹುಲಸೂರಿನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಗೋರ್ಟಾದ ಶ್ರೀ ಪ್ರಭುದೇವ ಸ್ವಾಮೀಜಿ ನೇತೃತ್ವ, ಖೇಳಗಿ ಶ್ರೀ ಶಿವಲಿಂಗ ಸ್ವಾಮೀಜಿ, ಸಾಯಗಾಂವ ಶ್ರೀ ಶಿವಾನಂದ ಸ್ವಾಮೀಜಿ ಸಮ್ಮುಖ, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಶರಣು ಸಲಗರ, ಬಿಬಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಕೆಎನ್‌ಎನ್‌ಎಲ್ ನಿವೃತ್ತ ಎಂಡಿ ಮಲ್ಲಿಕಾರ್ಜುನ ಗುಂಗೆ, ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ಸಹ ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ನಿರ್ದೇಶಕ ಸುಭಾಷ ಹೊಳಕುಂದೆ, ಬಿಡಿವಿಸಿ ಉಪಾಧ್ಯಕ್ಷ ಡಾ.ಜಿ.ಎ. ಭೂರಳೆ, ಕಾರ್ಯದರ್ಶಿ ನಾಗಯ್ಯ ಸ್ವಾಮಿ, ಕೋಶಾಧ್ಯಕ್ಷ ಶಶಿರಾಜ ಶಾಶೆಟ್ಟೆ, ಸದಸ್ಯರಾದ ಗದಗೆಪ್ಪ ಹಲಶೆಟ್ಟೆ, ಬಸವರಾಜ ಪಾಟೀಲ್, ಸೋಮಶೇಖರಯ್ಯ ವಸದ, ಮಲ್ಲಿನಾಥ ಮಂಠಾಳೆ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ರಾಠೋಡ್, ಪ್ರಮುಖರಾದ ಮಲ್ಲಯ್ಯ ಹಿರೇಮಠ, ಅಶೋಕ ನಾಗರಾಳೆ, ಕಾಶಪ್ಪ ಸಕ್ಕರಬಾವಿ, ಜಗನ್ನಾಥ ಖೂಬಾ, ಬದ್ರಿನಾಥ ಪಾಟೀಲ್, ಅನೀಲಕುಮಾರ ರಗಟೆ, ರೇವಣಪ್ಪ ರಾಯವಾಡೆ, ಸುನೀಲ ಪಾಟೀಲ್, ಪ್ರದೀಪ್ ವಾತಡೆ ಇತರರಿದ್ದರು. ಬಿಡಿಪಿಸಿ ಸಹ ಕಾರ್ಯದರ್ಶಿ ವಿವೇಕ ಹೊದಲೂರೆ ಸ್ವಾಗತಿಸಿದರು. ಡಾ.ರುದ್ರಮಣ ಮಠಪತಿ ನಿರೂಪಣೆ ಮಾಡಿದರು.
ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಲಿದೆ ಕಲ್ಯಾಣ: ಬಸವಣ್ಣನವರ ಕಾಯಕ ಭೂಮಿ ಬಸವಕಲ್ಯಾಣ ಬರುವ ದಿನಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಧಾರ್ಮಿಕ, ಅಧ್ಯಾತ್ಮ ಕೇಂದ್ರ, ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಲಿದೆ. ನೂತನ ಅನುಭವ ಮಂಟಪ ಕಾಮಗಾರಿ ವರ್ಷದಲ್ಲಿ ಪೂರ್ಣಗೊಳಿಸಿ ಲೋಕರ್ಪಣೆ ಮಾಡುವ ಸಂಕಲ್ಪ ಸರ್ಕಾರ ಹಾಗೂ ನಮ್ಮದು. ಇದರಿಂದ ಶರಣರ ತತ್ವಾದರ್ಶಗಳನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಅಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರರ ದೇವಸ್ಥಾನದ ಜೀರ್ಣೋದ್ಧಾರವಾಗಿದೆ. ವಿಶಿಷ್ಟ, ದಿವ್ಯ ಭವ್ಯವಾಗಿ ಕೆಲಸ ನಡೆದಿದೆ ಎಂದು ದೇವಸ್ಥಾನ ಪದಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಧಾರ್ಮಿಕ ಪ್ರಧಾನ ದೇಶ ನಮ್ಮದು. ಋಷಿ ಮುನಿಗಳು, ಸಾಧು-ಸಂತರ, ಶರಣರು ನಡೆದಾಡಿದ ಪವಿತ್ರ ನೆಲ ಇದಾಗಿದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕತೆಯಿಂದಾಗಿ ಭಾರತವನ್ನು ವಿಶ್ವಗುರು ಎಂದು ಹೇಳಲಾಗುತ್ತಿದೆ. ಸತ್ಯ, ನ್ಯಾಯ, ನೀತಿಯ ತವರೂರು ನಮ್ಮ ದೇಶ. ಸಮಾಜದಲ್ಲಿ ಪರಿವರ್ತನೆ ಬಯಸುವ ಮುನ್ನ ಸ್ವಯಂ ಪರಿವರ್ತನೆ ಅವಶ್ಯಕ. ವ್ಯಕ್ತಿ ಪರಿವರ್ತನೆ ಆದರೆ ಪರಿಸರ ಹಾಗೂ ಸಮಾಜದಲ್ಲಿ ಪರಿವರ್ತನೆ ಕಾಣಲು ಸಾಧ್ಯವಾಗುತ್ತದೆ. ಮಹಾಶಿವರಾತ್ರಿಯಂದು ಶಿವಭಕ್ತರು ಭಕ್ತಿ-ಶ್ರದ್ಧೆಯಿಂದ ಶಿವನ ಆರಾಧನೆ ಮಾಡುತ್ತಾರೆ. ಓಂ ನಮಃ ಶಿವಾಯ ಮಂತ್ರದಲ್ಲಿ ದೊಡ್ಡ ಶಕ್ತಿ ಇದೆ. ಆರಾಧನೆಯಿಂದ ಜೀವನದಲ್ಲಿನ ಕೆಡಕು ಅಳಿಸಿ ಇಷ್ಟಾರ್ಥ ಈಡೇರಲಿವೆ ಎನ್ನುವ ನಂಬಿಕೆ ಭಕ್ತರಲ್ಲಿದೆ ಎಂದರು.
ಒಗ್ಗಟ್ಟಿನಲ್ಲಿ ಬಲವಿದೆ. ಸಂಘಟನೆಯಲ್ಲಿ ಶಕ್ತಿ ಇದೆ. ಒಗ್ಗಟ್ಟಿನ ಕಡೆ ಹೋಗೋಣ. ಸಮಾಜದ ಸಂಘಟನೆ ಮಾಡುವ ಮೂಲಕ ಇತರ ಸಮುದಾಯದವರನ್ನು ನಮ್ಮೊಂದಿಗೆ ಕೊಂಡೊಯ್ದು ಸುಂದರ ಸಮಾಜ ನಿರ್ಮಾಣ ಮಾಡೋಣ.| ಈಶ್ವರ ಖಂಡ್ರೆಜಿಲ್ಲಾ ಉಸ್ತುವಾರಿ ಸಚಿವರು
ಶ್ರೀ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರಗೊಂಡು ಅದ್ಭುತವಾಗಿ ಕಾಣುತ್ತಿದೆ. ದೇವಸ್ಥಾನ ಕಮಿಟಿ ಕಾರ್ಯ ಶ್ಲಾಘನೀಯ. ಶಿವರಾತ್ರಿ ನಿಮಿತ್ತ ಉದ್ಘಾಟನೆ ಮತ್ತು ಸಾಮೂಹಿಕ ಇಷ್ಟಲಿಂಗ ಪೂಜೆ ಆಯೋಜಿಸಲಾಗಿದೆ. ಇಷ್ಟಲಿಂಗ ಪೂಜೆ ಗುರು ಬಸವಣ್ಣನವರು ವಿಶ್ವಕ್ಕೆ ನೀಡಿದ ಅದ್ಭುತ ಕೊಡುಗೆ.| ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿಹುಲಸೂರು