ಹುಲಸೂರು: ಜನರಿಗೆ ಜಗತ್ತು ತೋರಿಸಿದ ಅಲ್ಲಮಪ್ರಭು 12ನೇ ಶತಮಾನದಲ್ಲಿ ಅನುಷ್ಠಾನ ಮಾಡಿರುವ ಪವಿತ್ರ ಪುಣ್ಯ ಕ್ಷೇತ್ರದಲ್ಲಿ ಓಡಾಡುವ ಭಾಗ್ಯ ನಿಮಗೆ ದೊರತಿದೆ ಎಂದು ಸುತ್ತೂರು ವೀರ ಸಿಂಹಾಸನ ಸಂಸ್ಥಾನ ಮಠದ ಪೀಠಾಧಿಪತಿ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನುಡಿದರು.
ಪಟ್ಟಣದ ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿಗಳ 75ನೇ ಅಮೃತ ಮಹೋತ್ಸವ ನಿಮಿತ್ತ ಅಲ್ಲಮಪ್ರಭು ಶೂನ್ಯಪಿಠ ಅನುಭವ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಅನುಭವ ಮಂಟಪದ ಮಹಾದ್ವಾರ ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಹುಲಸೂರು ಶ್ರೀಗಳು ಬಸವ ತತ್ವ ಪ್ರಚಾರ, ಪ್ರಸಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 23 ಸಾವಿರ ಕಿಮೀ ಪಾದಯಾತ್ರೆ ಮೂಲಕ ಬಸವ ಸಂದೇಶ ಸಾರಿದ್ದಾರೆ. ಶಿವಾನಂದ ಶ್ರೀಗಳ ಕುರಿತು ತ್ರಿಪದಿ ಕಾವ್ಯ ಬರೆದ ಪುಸ್ತಕದಲ್ಲಿ ಎಲ್ಲವೂ ಒಳಗೊಂಡಿದೆ ಎಂದರು.
ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಮಾತನಾಡಿ, ಕೆಲ ವರ್ಷ ಹಿಂದೆ ಪಾಳುಬಿದ್ದಿದ್ದ ಅಲ್ಲಮಪ್ರಭು ದೇವರ ಶೂನ್ಯ ಪೀಠ ಅನುಭವ ಮಂಟಪ ಭಕ್ತರ ಸಹಕಾರದಿಂದ ಸಾಕಷ್ಟು ಅಭಿವೃದ್ಧಿಗೊಳಿಸಿದ್ದು, ಮಠದ ಮಹಾದ್ವಾರ ಸುತ್ತೂರು ಜಗದ್ಗುರು ಉದ್ಘಾಟನೆ ಮಾಡಿರುವುದು ಸಂತಸ ತಂದಿದೆ ಎಂದರು.
ಶಾಸಕ ಶರಣು ಸಲಗರ ಮಾತನಾಡಿದರು. ಸಾಯಗಾಂವ ಶ್ರೀ ಶಿವಾನಂದ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ದೀಪಾರಾಣಿ ಭೋಸ್ಲೆ, ಉಪಾಧ್ಯಕ್ಷೆ ಮೀರಾಬಾಯಿ ಗಾಯಕವಾಡ, ಸಹಾಯಕ ಆಯುಕ್ತೆ ಸಾವಿತ್ರಿ ಸಲಗರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಂಭುಲಿಂಗ ಕಾಮಣ್ಣ, ಡಾ.ಸೋಮನಾಥ ಯಾಳವಾರ, ಚನ್ನಬಸವ ಬಳತೆ, ಮಲ್ಲಮ್ಮ ಪಾಟೀಲ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಓಂಕಾರ ಪಟ್ನೆ, ಶಿವರಾಜ ನರಶೆಟ್ಟಿ, ಬಸವರಾಜ ಮುಕ್ತಾ, ರಾಜಕುಮಾರ ನಿಡೋದೆ, ಶಶಿಕಲಾ ಪಟ್ನೆ, ಶ್ರೀದೇವಿ ನಿಡೋದೆ ಇದ್ದರು.
ಶಂಕ್ರಯ್ಯ ಸ್ವಾಮಿ, ನವಲಿಂಗ ಪಾಟೀಲ್, ಪ್ರೇಮ ಗೌಂಡಗಾವೆ ಸಂಗೀತ ಸೇವೆ ನಡೆಸಿಕೊಟ್ಟರು. ಕು.ಭವಾನಿ ಖಪಲೆ ಸಂಗಡಿಗರ ವಚನ ನೃತ್ಯ ನೋಡುಗರ ಗಮನ ಸೆಳೆಯಿತು.
ಮುದ್ಗಲ್ ಶ್ರೀ ಮಹಾಂತ ಸ್ವಾಮೀಜಿ ಸ್ವಾಗತಿಸಿ ನಿರೂಪಣೆ ಮಾಡಿದರು. ಶ್ರೀ ಡಾ.ಶಿವಾನಂದ ಸ್ವಾಮೀಜಿ ಸಾಧನೆ ಕುರಿತು ಲೇಖಕ ಡಾ.ಸೋಮನಾಥ ಯಾಳವಾರ ಬರೆದ "ಬಸವನ ಬೆಳಕೇ ಎಲ್ಲಾಡಿ ಬಂದೆ' ಪುಸ್ತಕವನ್ನು ಬಿಡುಗಡೆಗೊಳಿಸಿ ಮಠದ ಮಹಾದ್ವಾರ ಲೋಕಾರ್ಪಣೆ ಮಾಡಲಾಯಿತು.
ಮೈಸೂರು ಭಾಗದವರು ಪುಣ್ಯವಂತರು. ಅಲ್ಲಿ ಕೃಷ್ಣರಾಜ ಸಾಗರ ಸೇರಿ ಅನೇಕ ನದಿಗಳು ಹರಿಯುತ್ತಿವೆ. ಕಲ್ಯಾಣ ಕರ್ನಾಟಕದಲ್ಲಿ ಬರಗಾಲ ಆವರಿಸಿದ್ದರಿಂದ ಸಾಕಷ್ಟು ಜನರು ಗುಳೆ ಹೋಗುತ್ತಿದ್ದಾರೆ. ಸರ್ಕಾರ ನಮ್ಮ ಗಡಿ ಭಾಗಕ್ಕೆ ಮಲತಾಯಿ ಧೋರಣೆ ಅನುಸರಿಸಬಾರದು.> ಶರಣು ಸಲಗರ ಶಾಸಕ ಬಸವಕಲ್ಯಾಣ