೪೬ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ನಿಮಿತ್ತ ಬಸವಕಲ್ಯಾಣದಲ್ಲಿ ಸೋಮವಾರ ಆಯೋಜಿಸಿದ್ದ ಸೈಕಲ್ ಜಾಥಾಕ್ಕೆ ಸಂಸದ ಸಾಗರ್ ಖಂಡ್ರೆ ಚಾಲನೆ ನೀಡಿದರು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ಗುರುಬಸವ ಪಟ್ಟದ್ದೇವರು, ಶಾಸಕ ಶರಣು ಸಲಗರ, ನೀಲಕಂಠ ರಾಠೋಡ್, ಬಸವರಾಜ ಕೋರಕೆ, ಶಶಿಕಾಂತ ದುರ್ಗೆ, ಡಾ.ಜಿ.ಎಸ್.ಭುರಳೆ, ಡಾ.ದತ್ತಾತ್ರೇಯ ಗಾದಾ, ನವಲಿಂಗ ಪಾಟೀಲ್ ಇತರರಿದ್ದರು. 
ಬೀದರ್

ಸೈಕಲ್ ಬಳಕೆಯಿಂದ ಉತ್ತಮ ಆರೋಗ್ಯ

ಬಸವಕಲ್ಯಾಣ: ಅನುಭವ ಮಂಟಪದಲ್ಲಿ ನಡೆಯಲಿರುವ ೪೬ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ-೨೦೨೫ ನಿಮಿತ್ತ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ಸೈಕಲ್ ಜಾಥಾ ಉತ್ಸವದ ಪ್ರಚಾರ ಜತೆಗೆ ಪರಿಸರ ಜಾಗೃತಿ ಮೂಡಿಸಿತು.
ಅಕ್ಕಮಹಾದೇವಿ ಕಾಲೇಜು ಮೈದಾನದಿಂದ ಅನುಭವ ಮಂಟಪವರೆಗೆ ಮುಖ್ಯರಸ್ತೆ ಮಾರ್ಗವಾಗಿ ಸೈಕಲ್ ಬಳಸೋಣ ಪರಿಸರ ಉಳಿಸೋಣ ಘೋಷವಾಕ್ಯದೊಂದಿಗೆ ನಡೆದ ಸೈಕಲ್ ಜಾಥಾದಲ್ಲಿ ಪೂಜ್ಯರು, ಜನಪ್ರತಿನಿಧಿಗಳು, ಗಣ್ಯರು, ಸಂಘ-ಸಂಸ್ಥೆ ಪದಾಧಿಕಾರಿಗಳು, ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಉದ್ಘಾಟನಾ ಸಮಾರಂಭದ ಸಾನ್ನಿದ್ಯ ವಹಿಸಿದ್ದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಸೈಕಲ್ ಬಳಕೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ವಾಯುಮಾಲಿನ್ಯ ತಡೆದು ಆರೋಗ್ಯಪೂರ್ಣ ಜೀವನಕ್ಕೆ ಬೇಕಿರುವ ಪರಿಸರ ಸಂರಕ್ಷಣೆ ಮಾಡಬಹುದು ಎಂದರು.
ಅನುಭವ ಮಂಟಪದಲ್ಲಿ ನ.೨೯, ೩೦ರಂದು ನಡೆಯಲಿರುವ ೪೬ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವದಲ್ಲಿ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ಪರಿಸರ ಉಳಿದರೆ ನಾವೆಲ್ಲರೂ ಉಳಿಯುತ್ತೇವೆ. ಆರೋಗ್ಯಪೂರ್ಣ ಜೀವನಕ್ಕೆ ಅಗತ್ಯವಿರುವ ಪರಿಸರ ಉಳಿಸಲು ಎಲ್ಲರೂ ಕಾಳಜಿ ವಹಿಸುವುದು ಅವಶ್ಯಕವಾಗಿದೆ ಎಂದರು.
ಭಾಲ್ಕಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಪ್ರಕೃತಿಯನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಜಗತ್ತಿಗೆ ಸಮಾನತೆ ಸಂದೇಶ ನೀಡಿದ ಬಸವಣ್ಣನವರ ಕಾಯಕ ಭೂಮಿ ಕಲ್ಯಾಣ ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದ ಶ್ರದ್ಧಾ ಕೇಂದ್ರವಾಗಲಿದೆ. ಭವಿಷ್ಯದ ದೃಷ್ಟಿಯಿಂದ ಶಬ್ದ ಮಾಲಿನ್ಯ, ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದೇ ಜಾಥಾದ ಮೂಲ ಆಶಯ ಎಂದು ತಿಳಿಸಿದರು.
ಸಂಸದ ಸಾಗರ್ ಖಂಡ್ರೆ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ ಬಸವಗುರು ಪೂಜೆ ನೆರವೇರಿಸಿದರು.
ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಬಸವಲಿಂಗ ದೇವರು, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಉಪಾಧ್ಯಕ್ಷ ಡಾ.ಜಿ.ಎಸ್. ಭುರಳೆ, ಶ್ರೀಕಾಂತ ಬಡದಾಳೆ, ಗ್ಯಾರಂಟಿ ಯೋಜನೆ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷ ನೀಲಕಂಠ ರಾಠೋಡ್, ಸಾಯಿಬಾಬಾ ಸ್ಟೀಲ್ ಮಾಲಿಕ ಬಸವರಾಜ ಮುರುಡೆ, ಪ್ರಮುಖರಾದ ರವಿ ಕೊಳಕೂರ, ಶಿವಕುಮಾರ ಬಿರಾದಾರ, ಸೂರ್ಯಕಾಂತ ಚಿಲ್ಲಾಬಟ್ಟೆ, ಆಕಾಶ ಖಂಡಾಳೆ, ಜಗನಾಥ ಪಾಟೀಲ್, ಶರಣು ದುರ್ಗೆ, ಪ್ರವೀಣ ಮಹಾಜನ್ ಇತರರಿದ್ದರು.
ಸೈಕಲ್ ಜಾಥಾ ಸಮಿತಿ ಅಧ್ಯಕ್ಷ ಲಕ್ಷ್ಮೀಕಾಂತ ಜ್ಯಾಂತೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಣೆ ಮಾಡಿದರು. ನವಲಿಂಗ ಪಾಟೀಲ ವಚನ ಗಾಯನ ಮಾಡಿದರು. ಜಾಥಾದಲ್ಲಿ ಪಾಲ್ಗೊಂಡ ಎಲ್ಲರಿಗೂ ಪ್ರಮಾಣಪತ್ರ ನೀಡಲಾಯಿತು.
"

ನಾವೆಲ್ಲರೂ ಆರೋಗ್ಯವಂತರಾಗಿರಲು ಮಾಲಿನ್ಯ ತಡೆದು ಪರಿಸರ ಸಂರಕ್ಷಿಸಬೇಕಿದೆ. ಕಾರು, ಬೈಕ್ ಬಳಕೆ ಕಡಿಮೆ ಮಾಡಿ ಸೈಕಲ್ ಬಳಸಬೇಕು. ಇದರಿಂದ ಆರೋಗ್ಯ ಕಾಪಾಡುವ ಜತೆಗೆ ಪರಿಸರ ಸಂರಕ್ಷಣೆಯೂ ಸಾಧ್ಯವಾಗಲಿದೆ.

| ಸಾಗರ್ ಖಂಡ್ರೆಸಂಸದ

"

ಆರೋಗ್ಯಪೂರ್ಣ ಸಮಾಜ ಕಟ್ಟಬೇಕು. ಇದಕ್ಕೆ ಪೂರಕವಾಗಿ ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸೈಕಲ್ ಜಾಥಾ ಹಮ್ಮಿಕೊಂಡಿರುವ ಪೂಜ್ಯ ಪಟ್ಟದ್ದೇವರ ಪ್ರಯತ್ನ ಶ್ಲಾಘನೀಯ. ಒಂದು ದಿನ ಜಾಥಾದಲ್ಲಿ ಭಾಗವಹಿಸಿದರೆ ಸಾಲದು, ವಿದ್ಯಾರ್ಥಿಗಳು ನಿತ್ಯ ಸೈಕಲ್ ಮೂಲಕ ಶಾಲಾ-ಕಾಲೇಜುಗಳಿಗೆ ಹೋದರೆ ಈ ಕಾರ್ಯಕ್ರಮ ಮಾಡಿದ್ದು ಸಾರ್ಥಕವೆನಿಸಲಿದೆ.

| ಶರಣು ಸಲಗರಶಾಸಕ