ಹುಮನಾಬಾದ್​ ಹೊರವಲಯದ ಹೈದರಾಬಾದ&ಮುಂಬೈ ರಾಷ್ಟೀಯ ಹೆದ್ದಾರಿಯಲ್ಲಿ ಗುರುವಾರ ರೈತರು ರಸ್ತೆ ತಡೆ ಮೂಲಕ ಬೃಹತ್​ ಪ್ರತಿಭಟನೆ ನಡೆಸಿದರು. 4. ಹುಮನಾಬಾದ್​ ಚೆಕ್​ಪೋಸ್ಟ್​ ಹತ್ತಿರ ಬೀದರ್​&ಕಲಬುರಗಿ ರಸ್ತೆಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶಮಾರ್ ಅವರಿಗೆ ರೈತ ಪರ ಸಂಘಟನೆಗಳಿಂದ ಮನವಿ ಪತ್ರ ಸಲ್ಲಿಸಲಾಯಿತು. ಎಸ್​ಪಿ ಪ್ರದಿಪ ಗುಂಟೆ, ಎಸಿ ಪ್ರಕಾಶ ಕುದರೆ, ತಹಸೀಲ್ದಾರ್​ ಜಗನ್ನಾಥ ಚೌರ್​ ಇತರರಿದ್ದರು. 
ಬೀದರ್

ಟನ್​ ಕಬ್ಬಿಗೆ ರು.5 ಸಾವಿರ ಎಫ್​ಆರ್​ಪಿ ನಿಗದಿಪಡಿಸಿ

ಹುಮನಾಬಾದ್​: ಟನ್​ ಕಬ್ಬಿಗೆ ಐದು ಸಾವಿರ ರೂ. ಎಫ್​ಆರ್​ಪಿ ನಿಗದಿಪಡಿಸುವುದು ಸೇರಿ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ (ಕೆಕೆಆರ್​ಎಸ್​) ಬೀದರ್​ ಜಿಲ್ಲಾ ಘಟಕ ಹಾಗೂ ವಿವಿಧ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ರೈತರು ಪಟ್ಟಣದ ಹೊರವಲಯದಲ್ಲಿ ಹೆದ್ದಾರಿ ಸಂಚಾರ ತಡೆ ನಡೆಸಿ ಬೃಹತ್​ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 65 ಸೇರಿ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತು.

ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಚಿದ್ರಿ ಬೈಪಾಸ್​ ಹಾಗೂ ಚಿದ್ರಿ ಪೆಟ್ರೋಲ್​ ಬಂಕ್​ ಸಮೀಪದ ಹೈದರಾಬಾದ್​&-ಮುಂಬೈ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ರೈತರು ಹಲವು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಹಳೆಯ ಚೆಕ್​ಪೋಸ್ಟ್​ ಸಮೀಪದ ಬೀದರ್​&ಕಲಬುರಗಿ ಹೆದ್ದಾರಿಯಲ್ಲಿ ರಸ್ತೆ ತಡೆ ಮುಂದುವರಿಸಿ ಸಂಜೆವರೆಗೂ ಪ್ರತಿಭಟನೆ ನಡೆಸಿದರು.

ರೈತ ಸಂಘದ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಮಾತನಾಡಿ, ರೈತರ ತೀವ್ರ ಸಂಕಷ್ಟದಲ್ಲಿದ್ದಾರೆ. ಬರಗಾಲ ಆವರಿಸಿದೆ. ರೈತರ ಜತೆ ಚಲ್ಲಾಟವಾಡದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಟನ್​ ಕಬ್ಬಿಗೆ 5,000 ರೂ. ಎಫ್​ಆರ್​ಪಿ ನಿಗದಿಪಡಿಸಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) 6,000 ರೂ.ನಿಗದಿಗೊಳಿಸಬೇಕು. ಬರಪೀಡಿತ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು ಸೇರಿ ಬೇಡಿಕೆಗಳ ಈಡೇರಿಕಗೆ ಪ್ರಧಾನಿ ಮೋದಿ ಅವರಿಗೆ ಬರೆದ ಮನವಿ ಪತ್ರವನ್ನು ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶಮಾರ್ ಅವರಿಗೆ ಸಲ್ಲಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದಾರ, ಯುವ ಕ್ರಾಂತಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಗುಂಡುರೆಡ್ಡಿ ಕಮಲಾಪುರೆ, ಜಯ ಕರ್ನಾಟಕ ಸಂಘಟನೆಯ ರಾಜ್ಯ ಸಂಚಾಲಕ ನವೀನ ಬತಲಿ, ರೈತ ಮುಖಂಡರಾದ ಕಿರಣಕುಮಾರ ಖಂಡ್ರೆ, ಸಂತೋಷಕುಮಾರ ಗುದಗೆ, ಅಶೋಕ ಕಾರಬರಿ, ವೀರರಡ್ಡಿ ಪಾಟೀಲ, ಖಾಸಿಂ ಅಲಿ, ಮುಕಿಮ್​ ನಂದಗಾವ, ಖಾನಸಾಬ್​ ನಾರಾಯಣಪುರ, ರುದ್ರಯ್ಯ ಸ್ವಾಮಿ, ಧೂಳಪ್ಪ ಆಣದೂರ, ಗಣಪತಿ ಕುಂಟೆ, ಸುಧಾಕರ ನಿರ್ಣಾ, ಪಾಂಡುರಂಗ ಬಸಿಲಾಪೂರ, ಮಹೇಶ ನಿರ್ಣಾ, ರೇವಣಯ್ಯ ಸ್ವಾಮಿ, ವಿವಿಧ ಸಂಘಟನೆಯ ಪ್ರಮುಖರಾದ ಸಚೀನ್​, ಸಂಗಮೇಶ ಭೂರೆ, ಪಪ್ಪುರಾಜ್​ ಚತುರೆ, ಭೀಮರಡ್ಡಿ ಸಿಂಧನಕೇರಾ, ಗಣಪತಿ ಅಷ್ಟೂರೆ, ಶಾಹಾಜೀ ಕನಕಟ್ಟಾ, ಪ್ರಭು ಸಂತೋಷಕರ, ರೇಷ್ಮಾ, ಶಕುಂತಲಾ ಬಿರಾದಾರ, ಅರವಿಂದ ಜೋಗಿರೆ ಇತರರು ಪಾಲ್ಗೊಂಡಿದ್ದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ: ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಬೇಕೆಂಬ ರೈತರ ಒತ್ತಾಯಕ್ಕೆ ಮಣಿದು ಸಂಜೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶಮಾರ್ ರೈತರಿಂದ ಮನವಿ ಪತ್ರ ಸ್ವೀಕರಿಸಿದರಿಂದ ಪ್ರತಿಭಟನೆ ಕೈಬಿಡಲಾಯಿತು.

ವಾಹನ ಸವಾರರ ಪರದಾಟ: ರೈತರ ರಸ್ತೆ ತಡೆಯಿಂದ ಹೆದ್ದಾರಿಯ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡುವಂತಾಯಿತು. ನಂತರ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಪರ್ಯಾಯ ಮಾರ್ಗದ ಮೂಲಕ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬಿಗಿ ಬಂದೋಬಸ್ತ್​:

ಪ್ರತಿಭಟನೆಯ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ನಿಯೋಜನೆಗೊಂಡಿದ್ದರು. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪ್ರದಿಪ್​ ಗುಂಟೆ, ಹೆಚ್ಚುವರಿ ಎಸ್​ಪಿ ಚಂದ್ರಕಾಂತ ಪೂಜಾರಿ ಸ್ಥಳದಲ್ಲಿದ್ದು ಪರಿಸ್ಥಿತಿಯನ್ನು ಗಮನಿಸಿದರು. ಡಿವೈಎಸ್​ಪಿ ಮಡೋಳಪ್ಪ, ಸಿಪಿಐ ಸಂತೋಷ ತಟ್ಟೆಪಳ್ಳಿ, ಅಲಿಸಾಬ್​ ಸೇರಿ ಪೊಲೀಸ್​ ಅಧಿಕಾರಿಗಳು ಬಂದೋಬಸ್ತ್​ ವ್ಯವಸ್ಥೆ ಮಾಡಿದ್ದರು.