ಬಸವಕಲ್ಯಾಣ ತಾಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮಕ್ಕಳೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮವನ್ನು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಉದ್ಘಾಟಿಸಿದರು. ಶಶಿಧರ ಕೋಸಂಬೆ, ಡಾ.ದತ್ತಾತ್ರೇಯ ಗಾದಾ, ಎಂ.ಎಸ್.ಶ್ರೀಧರ, ರಮೇಶ ಸುಲ್ಫಿ ಇತರರಿದ್ದರು. 
ಬೀದರ್

ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ

ರಾಜು ಯಮಕನಮರಡಿ
ಬಸವಕಲ್ಯಾಣ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಸಕಾಲದಲ್ಲಿ ಬಸ್ ಸೌಲಭ್ಯ ಕಲ್ಪಿಸಬೇಕು. ಮಕ್ಕಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಸಮಸ್ಯೆಗಳ ಪರಿಹಾರಕ್ಕಾಗಿ ಸಂಬಂಧಿತ ಅಧಿಕಾರಿಗಳು ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಶಶಿಧರ ಕೋಸಂಬೆ ಸೂಚಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ತಾಲೂಕು ಆಡಳಿತ, ತಾಪಂ, ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಮಕ್ಕಳೊಂದಿಗೆ ಮುಕ್ತ ಸಂವಾದ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಹಕ್ಕುಗಳ ರಕ್ಷಣೆಗೆ ಎಲ್ಲರೂ ಜವಾವ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಮನೆ, ಶಾಲೆ ಮತ್ತು ಶಾಲೆಯ ಪರಿಸರದಲ್ಲಿ ತಾವುಗಳ ಎದುರಿಸುತ್ತಿರುವ ಸಮಸ್ಯೆಗಳಿದ್ದರೆ ಸಂಬಂಧಿತರ ಗಮನಕ್ಕೆ ತರಬೇಕು. ಮಕ್ಕಳ ಹಕ್ಕುಗಳ ಉಲ್ಲಂಘನೆ, ಮಕ್ಕಳ ಮೇಲೆ ಅನ್ಯಾಯ ನಡೆದದ್ದು ಕಂಡು ಬಂದರೂ ತಕ್ಷಣ ಮಕ್ಕಳ ಸಹಾಯವಾಣಿಗೆ ಸಂಪರ್ಕಿಸಿ ಮಾಹಿತಿ ನೀಡಬೇಕು. ಅಗತ್ಯ ಬಿದ್ದರೆ ನಮ್ಮ ಮೊಬೈಲ್‌ಗೆ ನೇರವಾಗಿ ಸಂಪರ್ಕಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಮ್ಮೂರಲ್ಲಿ ಮರಾಠಿ ಮಾಧ್ಯಮ ಶಾಲೆ ಇದೆ. ಕನ್ನಡ ಕಲಿಯಲು ನಾವು ಕಲ್ಯಾಣಕ್ಕೆ ಬರಬೇಕಿದೆ. ನಮ್ಮೂರಲ್ಲಿ ಕನ್ನಡ ಶಾಲೆ ಆರಂಭಿಸಲು ಕ್ರಮಕೈಗೊಳ್ಳಿ ಎಂದು ಜಾನಾಪುರ ಗ್ರಾಮದ ವಿದ್ಯಾರ್ಥಿನಿ ಮಾಡಿದ ಮನವಿಗೆ ಸ್ಪಂದಿಸಿದ ಆಯೋಗದ ಅಧ್ಯಕ್ಷರು, ತಕ್ಷಣ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಇಒ ಅವರಿಗೆ ತಿಳಿಸಿದರು.
ಸಮಯಕ್ಕೆ ಸರಿಯಾಗಿ ಬಸ್ ಬರುವದಿಲ್ಲ. ಶಾಲೆಗೆ ಬಂದು ಹೋಗಲು ಸಮಸ್ಯೆಯಾಗುತ್ತಿದ್ದು, ಸಮಯಕ್ಕೆ ಬಸ್ ಸೌಲಭ್ಯ ಕಲ್ಪಿಸಿ ಎಂದು ಕೆಲ ಶಾಲೆ ವಿದ್ಯಾರ್ಥಿಗಳು ಸಮಸ್ಯೆ ತೋಡಿಕೊಂಡರು.
ಪರ್ತಾಪುರ ತಾಂಡಾದ ಶಾಲೆ ಕೋಣೆ ಹಾಳಾಗಿದೆ. ಮಳೆಗಾಲಯದಲ್ಲಿ ಸಮಸ್ಯೆಯಾಗುತ್ತಿದೆ. ಶಾಲಾ ಆವರಣದಲ್ಲಿ ಬಿಸಿಯೂಟ ಸಿದ್ಧಪಡಿಸುತ್ತಾರೆ. ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಿ ಎಂದು ಬಾಲಕಿ ಮನವಿ ಮಾಡಿಕೊಂಡರೆ ವಿವಿಧ ಶಾಲೆ ವಿದ್ಯಾರ್ಥಿಗಳು ಸಹ ಸಮಸ್ಯೆಗಳ ಕುರಿತು ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಕಾರ್ಯಕ್ರಮ ಉದ್ಘಾಟಿಸಿದರು. ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿದೇರ್ಶಕ ಎಂಎಸ್ ಶ್ರೀಧರ, ತಾಪಂ ಇಒ ರಮೇಶ ಸುಲ್ಫಿ, ಬಿಇಒ ಸಿದ್ದವೀರಯ್ಯ ರುದನೂರ, ಸಿಡಿಪಿಒ ಗೌತಮ ಸಿಂಧೆ, ಸಿಪಿಐ ಅಲಿಸಾಬ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೂಪಾ ಕೊಟೇಗೌಡರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಗೌರಿಶಂಕರ, ಆರ್‌ಎಲ್‌ಎಚ್‌ಪಿ ಯೋಜನಾ ಸಂಯೋಜಕ ನಾಗರಾಜ ಶೀಲವಂತ ಇದ್ದರು. ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ದಿಲೀಪಕುಮಾರ ಉತ್ತಮ ಸನ್ಮಾನಿಸಿದರು.
ಪ್ರಶಸ್ತಿ ಬಗ್ಗೆ ಜಾಗೃತಿ ಮೂಡಿಸಿ: ಮಗು ರಾಷ್ಟ್ರೀಯ ಸಂಪತ್ತು. ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಮೂಲಕ ಸಶಕ್ತ ವ್ಯಕ್ತಿತ್ವ ನಿರ್ಮಾಣ ಮಾಡುವುದು ಭವಿಷ್ಯದ ಸಶಕ್ತ ರಾಷ್ಟç ನಿರ್ಮಾಣಕ್ಕೆ ಅವಶ್ಯಕ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು. ಮಕ್ಕಳ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ತಮ್ಮ ಹಕ್ಕುಗಳನ್ನು ಅರಿತುಕೊಳ್ಳಬೇಕು. ಅನ್ಯಾಯವದರೆ ಪ್ರತಿಭಟಿಸಬೇಕು ಎನ್ನುವುದೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಆಶಯವಾಗಿದೆ. ರಾಜ್ಯ ಮಟ್ಟದ ಬಾಲ ಗೌರ ಪ್ರಶಸ್ತಿಗೆ ಈ ಭಾಗದಿಂದ ಅರ್ಜಿಗಳು ಬರುವುದೇ ಇಲ್ಲ. ಕಲ್ಯಾಣ ಕರ್ನಾಟಕದ ಮಕ್ಕಳು ಸಹ ಈ ಪ್ರಶಸ್ತಿ ಪಡೆಯಬೇಕು. ಈ ಪ್ರಶಸ್ತಿ ಕುರಿತು ಜಾಗೃತಿ ಮೂಡಿಸುವ ಕೆಲಸ ನಡೆಯಬೇಕು. ಅಧಿಕಾರಿಗಳು ಎಲ್ಲ ಮಕ್ಕಳನ್ನು ತಮ್ಮ ಮಕ್ಕಳು ಎನ್ನುವ ಭಾವದಿಂದ ನೋಡಬೇಕು. ಸರ್ಕಾರದ ಯೋಜನೆ ಮತ್ತು ಸೌಲಭ್ಯಗಳನ್ನು ಅವರಿಗೆ ತಲುಪಿಸಬೇಕು ಎಂದು ಸಲಹೆ ನೀಡಿದರು.