ಬಸವಕಲ್ಯಾಣ: ಸಮಾತೆಯ ತತ್ವಕ್ಕಾಗಿ ನಡೆದ ಕಲ್ಯಾಣ ಕ್ರಾಂತಿಯಲ್ಲಿ ಹುತಾತ್ಮರಾದ ಶರಣ ಹರಳಯ್ಯ, ಮಧುವರ ಹುತಾತ್ಮ ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ಇಲ್ಲಿಯ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಇಲ್ಲಿನ ಹರಳಯ್ಯನವರ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆಯಲ್ಲಿ ಬುಧವಾರ ಸಂಜೆ ನಡೆದ ಶಿವಯೋಗಿ ಸಿದ್ಧರಾಮ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
2011ರಲ್ಲಿ ಬಸವಕಲ್ಯಾಣದಲ್ಲಿ ನಮ್ಮ ತಂದೆ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರು ಹರಳಯ್ಯ ಮಧುವರಸ ಹುತಾತ್ಮ ಸಂಸ್ಮರಣ ಕಾರ್ಯಕ್ರಮ ಬೃಹತ್ ಪ್ರಮಾಣದಲ್ಲಿ ಆಯೋಜಿಸಿದ್ದರು. ಇಲ್ಲಿ ಹುತಾತ್ಮ ಸ್ಮಾರಕ ನಿಮಾರ್ಣ ಮಾಡುವುದಾಗಿ ಅವರು ಆಂದು ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ್ದರು. ಇದು ಅವರ ಕನಸು ಆಗಿತ್ತು. ಮುಂಬರುವ ದಿನಗಳಲ್ಲಿ ಸ್ಮಾರಕ ನಿಮಾರ್ಣ ಮಾಡಲು ಪ್ರಯತ್ನಿಸಲಾಗುವುದು ಎಮದು ಸಚಿವರು ತಿಳಿಸಿದರು.
ಮನುಕುಲದ ಒಳಿತಿಗಾಗಿ ನಾವೆಲ್ಲ ಚಿಂತನೆ ಮಾಡುವ ತತ್ವಗಳು ಬಸವತತ್ವದಲ್ಲಿದ್ದು, ಜಗತ್ತಿಗೆ ಎಲ್ಲ ಸಮಸ್ಯೆಗಳಿಗೆ ವಚನಗಳು ದಿವ್ಯ ಔಷಧಿಗಳಾಗಿವೆ. ನಾಡ ಹಬ್ಬ ವಿಜಯ ದಸಮಿ ಎಂದರೆ ವಿಜಯದ ಸಂಕೇತ. ಅಸತ್ಯದಿಂದ ಸತ್ಯದ ಕಡೆಗೆ, ಅಧರ್ಮದಿಂದ ಧರ್ಮದ ಕಡೆಗೆ, ಕೆಡಕಿನ ಮೇಲೆ ಒಳಿತಿನ ವಿಜಯವಾಗಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, ಸಮ ಸಮಾಜ ನಿಮಾರ್ಣಕ್ಕಾಗಿ ಪ್ರಾಣ ಬಲಿದಾನಗೈದ ಶರಣರ ಸ್ಮರಣಾರ್ಥವಾಗಿ ಹುತಾತ್ಮ ಶರಣರ ಸ್ಮಾರಕ ನಿಮಾರ್ಣವಾಗಬೇಕು. ಹಂಪಿ, ಮೈಸೂರು ಉತ್ಸವಗಳಂತೆ ಪ್ರತಿ ವರ್ಷ ಕಲ್ಯಾಣದಲ್ಲಿ ಉತ್ಸವ ನಡೆಯಬೇಕು ಎಂದು ಹೇಳಿದರು.
ಭಾಲ್ಕಿ ಹಿರೇಮಠದ ಶ್ರೀ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ, ಬಿಡಿಪಿಸಿ ಕೋಶ್ಯಾಧ್ಯಕ್ಷ ಜಗನ್ನಾಥ ಖೂಬಾ ಅಧ್ಯಕ್ಷತೆ ವಹಿಸಿದ್ದರು. ಪೂಜ್ಯ ಸತ್ಯಕ್ಕತಾಯಿ ಅನುಭಾವ ನೀಡಿದರು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಕಾರ್ಯದರ್ಶಿ ನಾಗಯ್ಯ ಸ್ವಾಮಿ, ಬಿಡಿಪಿಸಿ ಕಾರ್ಯದರ್ಶಿ ಅಶೋಕ ನಾಗರಾಳೆ, ನಿರ್ದೇಶಕ ಮಲ್ಲಿಕಾರ್ಜುನ ಚಿರಡೆ, ಜಿಲ್ಲಾ ಹೂಗಾರ ಸಮಾಜ ಅಧ್ಯಕ್ಷ ರಾಜಕುಮಾರ ಹೂಗಾರ, ಜೇಡರ ದಾಸಿಮಯ್ಯ ಸಮಾಜದ ಅಧ್ಯಕ್ಷ ಶಿವಕುಮಾರ ಸಿದ್ದವಿರೆ, ಮಡಿವಾಳ ಸಮಾಜದ ಅಧ್ಯಕ್ಷ ಗಣಪತಿ ಮಡಿವಾಳ, ಚಂಪಾವತಿ ಮಹಾಜನ, ಹೇಮಾ ನೆಹರು, ವಿದ್ಯಾವತಿ ಶೇರಿಕಾರ, ಬಸವರಾಜೇಶ್ವರಿ ನಾಗರಾಳೆ ಉಪಸ್ಥಿತರಿದ್ದರು. ಪ್ರತಾಪುರದ ನೀಲಾಂಬಿಕಾ ಅಕ್ಕನ ಬಳಗದವರು ವಚನ ಸಂಗೀತ ನಡೆಸಿಕೊಟ್ಟರು. ಶಿವಕುಮಾರ ಬಿರಾದಾರ ಸ್ವಾಗತಿಸಿದರೆ, ಕವಿತಾ ರಾಜೋಳೆ ನಿರೂಪಣೆ ಮಾಡಿದರು.
ಲಕ್ಷ್ಮಣ ಮೇತ್ರೆ ನಿರ್ದೇಶನದಲ್ಲಿ ಬೀದರ್ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳಿಂದ ಶಿವಯೋಗಿ ಸಿದ್ಧರಾಮ ನಾಟಕ ಪ್ರದರ್ಶನ ಜರುಗಿತು.