ಶಿಕ್ಷಕರಿಗೆ 'ಶಿಕ್ಷಕರ ಅರ್ಹತಾ ಪರೀಕ್ಷೆ' ಅನ್ವಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪಿನ ಮರು ಪರಿಶೀಲನೆ ಕುರಿತು ರಾಜ್ಯ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪದಾಧಿಕಾರಿಗಳು ಬೀದರ್‍ನಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. 
ಬೀದರ್

ರಾಜ್ಯ ಸರ್ಕಾರ ಮಧ್ಯಸ್ಥಿಕೆಗೆ ಒತ್ತಾಯ

ರೇವಣಸಿದ್ದಪ್ಪ ಪಾಟೀಲ್
ಬೀದರ್: ಶಿಕ್ಷಕರಿಗೆ 'ಶಿಕ್ಷಕರ ಅರ್ಹತಾ ಪರೀಕ್ಷೆ'(ಟಿಇಟಿ) ಅನ್ವಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪಿನ ಮರು ಪರಿಶೀಲನೆ ಕುರಿತು ರಾಜ್ಯ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಒತ್ತಾಯಿಸಿದೆ.
ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಗುರುವಾರ ನಿಯೋಗದಲ್ಲಿ ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಶಿಕ್ಷಕರ ಅರ್ಹತಾ ಪರೀಕ್ಷೆ ಕುರಿತು 2026 ರ ಮೇ 29 ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶಿಕ್ಷಕ ಪರಿಷತ್ 2010ಕ್ಕೆ ಮುಂಚೆ ಶಿಕ್ಷಕರಾಗಿ ನೇಮಕಗೊಂಡವರಿಗೆ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯಗೊಳಿಸಿದೆ. ಇದರಿಂದ ದೇಶದಾದ್ಯಂತ 17 ಲಕ್ಷ ಶಿಕ್ಷಕರಲ್ಲಿ ಸೇವಾ ಭದ್ರತೆ ಹಾಗೂ ಭವಿಷ್ಯದ ಕುರಿತು ಅಭದ್ರತೆ ಕಾಡುತ್ತಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.
2010ಕ್ಕೆ ಮುಂಚೆ ದೇಶದ ಎಲ್ಲ ರಾಜ್ಯಗಳಲ್ಲಿ ಆಯಾ ಸಮಯದಲ್ಲಿ ಚಾಲ್ತಿಯಲ್ಲಿದ್ದ ನಿಯಮ ಹಾಗೂ ಆಯ್ಕೆ ವಿಧಾನದ ಅನುಸಾರ ಲಕ್ಷಾಂತರ ಶಿಕ್ಷಕರ ನೇಮಕಾತಿ ಆಗಿದೆ. ನೇಮಕಗೊಂಡ ಶಿಕ್ಷಕರು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ನ್ಯಾಯಾಲಯದ ತೀರ್ಪನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕ ಮತ್ತು ಸಂಸ್ಥೆಯ ಸಾಂವಿಧಾನಿಕ ಕರ್ತವ್ಯವಾಗಿದೆ. ನ್ಯಾಯಾಂಗ ಕಾನೂನು ವ್ಯಾಖ್ಯಾನಿಸುವಾಗ ವ್ಯತ್ಯಾಸವಾದಲ್ಲಿ ಸಾರ್ವಜನಿಕ ಹಿತಾಸಕ್ತಿಯಲ್ಲಿ ನೀತಿ ಹಾಗೂ ಶಾಸಕಾಂಗ ಪರಿಹಾರಗಳನ್ನು ಒದಗಿಸುವ ಅಧಿಕಾರ ಸಂಸತ್ತು, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಇದೆ ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಕ ಪರಿಷತ್ ಆದೇಶದನ್ವಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಿದ್ದಲ್ಲಿ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಲಿವೆ. ಹೀಗಾಗಿ ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡಲು, ಶಿಕ್ಷಕರ ಸೇವಾ ಹಕ್ಕು, ಹಿರಿತನ, ಬಡ್ತಿ ನಿರೀಕ್ಷೆ ಹಾಗೂ ಇತರ ಕಾನೂನು ಬದ್ಧ ಪ್ರಯೋಜನಗಳನ್ನು ರಕ್ಷಿಸಲು ಅಗತ್ಯ ಆಡಳಿತಾತ್ಮಕ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪರಮೇಶ್ವರ ಬಿರಾದಾರ ನಿಯೋಗದ ನೇತೃತ್ವ ವಹಿಸಿದ್ದರು. ಕರ್ನಾಟಕ ರಾಜ್ಯ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಶಾಂತ ರಾಗಾ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ವಿಜಯಕುಮಾರ ಪಾಟೀಲ ಯರನಳ್ಳಿ, ಕಾರ್ಯದರ್ಶಿ ರಮೇಶ ಪಾಟೀಲ, ಖಜಾಂಚಿ ಸಂತೋಷ್ ಮಂಗಳೂರೆ, ಲಕ್ಷ್ಮಣ ಪೂಜಾರಿ, ಸಂತೋಷ್ ಸೋಲಪುರೆ, ನರಸಾರೆಡ್ಡಿ, ಸಂಗಮೇಶ ನೇಳಗೆ, ಸತೀಶ್ ಬಿರಾದಾರ, ನಾಗನಾಥ ಪಾಟೀಲ, ಗೋಪಾಲರಾವ್ ಕುಲಕರ್ಣಿ ಮತ್ತಿತರರು ಇದ್ದರು.