ಔರಾದ್: ನೆಮ್ಮದಿಯ ಜೀವನಕ್ಕೆ ಸದೃಢ ಆರೋಗ್ಯ ಅವಶ್ಯ. ಕಾಲ ಕಾಲಕ್ಕೆ ತಕ್ಕಂತೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ನೆಮ್ಮದಿಯಿಂದ ಜೀವನ ಸಾಗಿಸಬೇಕು ಎಂದು ಯಶಸ್ವಿನಿ ಜಿಲ್ಲಾ ಸಂಯೋಜಕ ಪ್ರಶಾಂತ ಸೋಪ್ಪಣ್ಣ ಹೇಳಿದರು.
ತಾಲೂಕಿನ ನಾಗಮಾರಪಳ್ಳಿ ಗ್ರಾಮದಲ್ಲಿ ಬುಧವಾರ ವಿ.ಕೇರ್ ಆಸ್ಪತ್ರೆ ಹಾಗೂ ಯಶಸ್ವಿನಿ ಟ್ರಸ್ಟ್ ಸಹಯೋಗದಲ್ಲಿ ವಿ&ಕೇರ್ ಆಸ್ಪತ್ರೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ತಪಾಸಣೆಯಲ್ಲಿ ರ್ನಿಲಕ್ಷ ಸಲ್ಲದು, ಪ್ರತಿದಿನ ಹೆಚ್ಚು ನಡೆದಾಡುವ ಅಭ್ಯಾಸ ರೂಢಿಸಿಕೊಂಡರೆ ಆರೋಗ್ಯ ಉತ್ತಮಪಡಿಸಿಕೊಳ್ಳಬಹುದು ಎಂದರು.
ವಿ&ಕೇರ್ ಆಸ್ಪತ್ರೆ ವ್ಯವಸ್ಥಾಪಕ ವಿದ್ಯಾಸಾಗರ್ ಬಿರಾದಾರ್ ಮಾತನಾಡಿ, ಶಿಬಿರಗಳು ವ್ಯಕ್ತಿಗಳ ಆರೋಗ್ಯ ತಪಾಸಣೆ ಜತೆಗೆ ಮುಂದೆ ಎದುರಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ಪತ್ತೆ ಹಚ್ಚುವಲ್ಲಿ ಸಹಕಾರಿ ಆಗಿವೆ. ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಈ ಶಿಬಿರ ಏರ್ಪಡಿಸಲಾಗಿದೆ ಎಂದರು.
ಪಿಡಿಒ ಸಂಗೀತಾ ದೇಶಮುಖ ಮಾತನಾಡಿ, ಇಂತಹ ಆರೋಗ್ಯ ಶಿಬಿರ ಹಳ್ಳಿಗಳಲ್ಲಿ ಹೆಚ್ಚು ನಡೆಯಬೇಕು. ಇದರಿಂದ ಗ್ರಾಮಾಂತರ ಪ್ರದೇಶದ ಜನಸಾಮಾನ್ಯರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಸಾಧ್ಯ ಎಂದರು.
ಶಿಬಿರದಲ್ಲಿ 130ಕ್ಕೂ ಹೆಚ್ಚು ಜನರಿಗೆ ಬಿಪಿ, ಶುಗರ್ ಪರೀಕ್ಷೆ, ಇಸಿಜಿ ತಪಾಸಣೆ ಮಾಡಿ, ಉಚಿತ ಔಷಧ ನೀಡಲಾಯಿತು. ಡಾ.ನಿತಿನ್ ಮಲ್ಲಾಸುರೆ, ಡಾ.ಸ್ವಾತಿ ರಾಜೋಳೆ ಇತರರಿದ್ದರು.