ಬೀದರ್: ಜಿಲ್ಲೆಯ ಖಾಸಗಿ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕವು ಭಾನುವಾರ ಆಗ್ರಹ ಪತ್ರ ಅಭಿಯಾನ ಆರಂಭಿಸಿತು.
ಅಭಿಯಾನದ ಅಂಗವಾಗಿ ವೇದಿಕೆಯ ಪದಾಧಿಕಾರಿಗಳು ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಅವರ ನೇತೃತ್ವದಲ್ಲಿ ತಾಲ್ಲೂಕಿನ ಕೊಳಾರ(ಕೆ) ಕೈಗಾರಿಕಾ ಪ್ರದೇಶದಲ್ಲಿ ಇರುವ ಖಾಸಗಿ ಕಾರ್ಖಾನೆಗಳಿಗೆ ಭೇಟಿ ಕೊಟ್ಟು ಕಾರ್ಖಾನೆಗಳ ಮುಖ್ಯಸ್ಥರಿಗೆ ಆಗ್ರಹ ಪತ್ರ ನೀಡಿದರು.
ವೇದಿಕೆಯ ರಾಜ್ಯ ಅಧ್ಯಕ್ಷ ಟಿ.ಎ. ನಾರಾಯಣಗೌಡರ ಸೂಚನೆ ಮೇರೆಗೆ ನವೆಂಬರ್ 30 ರ ವರೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸೋಮನಾಥ ಮುಧೋಳ ತಿಳಿಸಿದರು.
ಕರ್ನಾಟಕದ ನೆಲ, ಜಲ, ವಿದ್ಯುತ್, ರಸ್ತೆ, ಮೂಲಸೌಕರ್ಯ, ಮಾನವ ಸಂಪನ್ಮೂಲ, ಸಾರ್ವಜನಿಕ ವ್ಯವಸ್ಥೆ ಹಾಗೂ ಸರ್ಕಾರದ ನೀತಿಗಳ ಪ್ರಯೋಜನ ಪಡೆದು, ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಗಳು ನಾಡಿನ ಜನರ ಉದ್ಯೋಗದ ಆಶೋತ್ತರಗಳಿಗೂ ಸ್ಪಂದಿಸಬೇಕಾಗಿದೆ. ಇದು ಕರ್ನಾಟಕದಲ್ಲಿನ ಖಾಸಗಿ ಕಾರ್ಖಾನೆಗಳು ಹಾಗೂ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಕೂಡ ಆಗಿದೆ ಎಂದು ಹೇಳಿದರು.
ಅರ್ಹತೆ ಹಾಗೂ ಸಾಮಥ್ರ್ಯ ಹೊಂದಿದ ನಂತರವೂ ಕನ್ನಡಿಗ ಅಭ್ಯರ್ಥಿಗಳಿಗೆ ಉದ್ಯೋಗ ನಿರಾಕರಿಸಲಾಗುತ್ತಿದೆ. ನೇಮಕಾತಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಅಭಿಯಾನ ಶುರು ಮಾಡಲಾಗಿದೆ ಎಂದು ತಿಳಿಸಿದರು.
ಅಭಿಯಾನದ ಅವಧಿಯಲ್ಲಿ ಕಾರ್ಖಾನೆಗಳಿಗೆ ಆಗ್ರಹ ಪತ್ರ ನೀಡಿ, ಕಾರ್ಖಾನೆಗಳಲ್ಲಿ ಇರುವ ಒಟ್ಟು ಹುದ್ದೆಗಳು, ಅದರಲ್ಲಿ ಎಷ್ಟು ಜನ ಕನ್ನಡಿಗರಿಗೆ ಉದ್ಯೋಗ ಕೊಡಲಾಗಿದೆ, ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಕೈಗೊಂಡ ಕ್ರಮಗಳು ಇತ್ಯಾದಿಗಳ ಕುರಿತು ಮಾಹಿತಿ ಪಡೆದು, ರಾಜ್ಯ ಘಟಕಕ್ಕೆ ಸಲ್ಲಿಸಲಾಗುವುದು. ರಾಜ್ಯ ಘಟಕವು ಮುಂದಿನ ಕ್ರಮಕ್ಕಾಗಿ ಸಂಬಂಧಪಟ್ಟ ಸಂಸ್ಥೆಗಳು ಹಾಗೂ ಸರ್ಕಾರದ ಗಮನ ಸೆಳೆಯಲಿದೆ ಎಂದು ತಿಳಿಸಿದರು.
ಜಿಲ್ಲೆಯ ಕಾರ್ಖಾನೆಗಳು ಹೊರ ರಾಜ್ಯಗಳ ನೌಕರರಿಗೆ ಪ್ರಾತಿನಿಧ್ಯ ನೀಡುವುದನ್ನು ಕೈಬಿಡಬೇಕು. ಜಿಲ್ಲೆಯ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ ಒದಗಿಸಬೇಕು ಎಂದು ಆಗ್ರಹಿಸಿದರು.
ವೇದಿಕೆಯ ಪದಾಧಿಕಾರಿಗಳು ಇದಕ್ಕೂ ಮುನ್ನ ಕೈಗಾರಿಕಾ ಪ್ರದೇಶದಲ್ಲಿ ಪಾದಯಾತ್ರೆ ಸಹ ನಡೆಸಿದರು.
ವೇದಿಕೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಸೋಮಶೇಖರ ಸಜ್ಜನ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಗೌಡ, ಭಾಲ್ಕಿ ತಾಲ್ಲೂಕು ಅಧ್ಯಕ್ಷ ಬಂಡೆಪ್ಪ ಕರಸಣ್ಣ, ಹುಮನಾಬಾದ್ ತಾಲ್ಲೂಕು ಅಧ್ಯಕ್ಷ ಸಚಿನ್ ತಿಬಶೆಟ್ಟಿ, ಬೀದರ್ ತಾಲ್ಲೂಕು ಅಧ್ಯಕ್ಷ ಲಕ್ಷ್ಮಣ ಅಟಕಾರ್, ವಿನಾಯಕ ರೆಡ್ಡಿ, ಮಲ್ಲಿಕಾರ್ಜುನ ಸಿಕೇನಪುರೆ, ಪರಮೇಶ್ ಮೈಲಾರೆ, ನಾಗಯ್ಯ ಸ್ವಾಮಿ ಹಳ್ಳಿಖೇಡ, ಪ್ರದೀಪ್ ಬಿರಾದಾರ, ಶ್ರೀಮಂತ ಬಿರಾದಾರ, ದತ್ತು ಧನಗರ ಮತ್ತಿತರರು ಪಾಲ್ಗೊಂಡಿದ್ದರು.