ಭಾಲ್ಕಿಚನ್ನಬಸವಾಶ್ರಮ ಪರಿಸರ ಸಮೀಪದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಸಾವಿರಾರೂ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. 
ಬೀದರ್

ಮಕ್ಕಳಲ್ಲಿ ಲಿಂಗಪೂಜೆ ಆಸಕ್ತಿ ಬೆಳೆಸಿ

ಮಕ್ಕಳಲ್ಲಿ ಲಿಂಗಪೂಜೆ ಆಸಕ್ತಿ ಬೆಳೆಸಿ
ವಿಜಯವಾಣಿ ಸುದ್ದಿಜಾಲ ಭಾಲ್ಕಿ
ಚನ್ನಬಸವಾಶ್ರಮ ಪರಿಸರ ಸಮೀಪದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿತು.
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಭಾನುವಾರ ಆಯೋಜಿಸಿದ್ದ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ವಿವಿಧೆಡೆಯ ಸಾವಿರಾರು ಭಕ್ತರು ಶ್ರದ್ಧೆ, ಭಕ್ತಿಯಿಂದ ಲಿಂಗಪೂಜೆಯಲ್ಲಿ ಭಾಗಿಯಾಗಿದ್ದರು.
ಲಿಂಗಪೂಜೆಯ ವಿಧಿ ವಿಧಾನ ತಿಳಿಸಿ ಕೊಟ್ಟ ಪೂಜ್ಯರು ಮಾತನಾಡಿ, ಇಷ್ಟಲಿಂಗದಲ್ಲಿ ಅದ್ಬುತ ಶಕ್ತಿ ಅಡಗಿದೆ. ಮನದ ಮೈಲಿಗೆ ತೊಳೆದು ಮನಸ್ಸು ಶಾಂತಗೊಳಿಸುವ ಮತ್ತು ಮನುಷ್ಯ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುವ ಶಕ್ತಿ ಇಷ್ಟಲಿಂಗ ಪೂಜೆಯಲ್ಲಿದೆ. ಲಿಂಗಪೂಜೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸಬಾರದು. ಪ್ರತಿಯೊಬ್ಬರೂ ಪ್ರತಿನಿತ್ಯ ಇಷ್ಟಲಿಂಗ ಪೂಜೆಯನ್ನು ಮಾಡುವುದು ರೂಢಿಸಿಕೊಳ್ಳಬೇಕು. ಮಕ್ಕಳಲ್ಲಿ ಬಾಲ್ಯದಿಂದಲೇ ಇಷ್ಟಲಿಂಗ ಪೂಜೆಯ ಆಸಕ್ತಿ ಬೆಳೆಸಿದಲ್ಲಿ ಅವರು ಮುಂದೆ ದೇಶಕ್ಕೆ ಉತ್ತಮ ಆಸ್ತಿಯಾಗುತ್ತಾರೆ. ವರ್ಷಕ್ಕೊಮ್ಮೆ ಬರುವ ಶಿವರಾತ್ರಿ ದಿನದಂದು ನಡೆಯುವ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಭಾಗಿಯಾಗುವುದರಿಂದ ದೈವಿ ಶಕ್ತಿ ಹೆಚ್ಚಿಸುತ್ತದೆ. ಹಾಗಾಗಿ ಎಲ್ಲರೂ ಪ್ರತಿದಿನ ಲಿಂಗಪೂಜೆ ಮಾಡುವುದಾಗಿ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಬಸವಲಿಂಗ ದೇವರು ನೇತೃತ್ವ ವಹಿಸಿದ್ದರು. ಹಿರಿಯ ನ್ಯಾಯವಾದಿ ರಾಜಶೇಖರ ಅಷ್ಟೂರೆ, ಶಾರದಾ ಹೋಟೆಲ್ ಮಾಲಿಕ ಬಾಬುರಾವ ಹುಣಜೆ ಬಸವಗುರುವಿನ ಪೂಜೆ ನೆರವೇರಿಸಿದರು. ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ ಇತರರಿದ್ದರು. ಹಾಸ್ಯ ಕಲಾವಿದ ನವಲಿಂಗ ಪಾಟೀಲ್ ನಿರೂಪಣೆ ಮಾಡಿ ವಂದಿಸಿದರು.