ಯಾದಗಿರಿ: ಬೆಳಕಿನ ಹಬ್ಬ ದೀಪಾವಳಿ ಆರಂಭವಾಗುತ್ತಿದ್ದಂತೆ ನಗರದಲ್ಲಿ ಸಿದ್ಧತೆ ಭರದಿಂದ ಸಾಗಿದೆ. ಹಬ್ಬದ ಸಂಭ್ರಮ ಒಂದೆಡೆಯಾದರೆ, ಮಾರುಕಟ್ಟೆಗಳಲ್ಲಿ ಜನರ ಖರೀದಿ ಉತ್ಸಾಹ ಮತ್ತೊಂದೆಡೆ. ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಬೆಳಗ್ಗೆಯಿಂದಲೇ ಗ್ರಾಹಕರ ಓಡಾಟ ಹೆಚ್ಚಾಗಿದ್ದು, ಮಾರುಕಟ್ಟೆಗಳು ತುಂಬಿ ತುಳುಕುತ್ತಿವೆ.
ಸುಭಾಷ ವೃತ್ತ, ಗಾಂಧಿ ವೃತ್ತ, ಹೊಸಳ್ಳಿ ಕ್ರಾಸ್, ಮೈಲಾಪುರ ಅಗಸಿ, ಗಂಜ್ ಏರಿಯಾ ಸೇರಿ ವಿವಿಧೆಡೆ ಹಬ್ಬದ ಖರೀದಿ ಕಳೆಗಟ್ಟಿದೆ. ಹಣ್ಣು&ಹಂಪಲು, ಹೂವು, ತೆಂಗಿನಕಾಯಿ, ಬಾಳೆದಿಂಡು, ಕುಂಬಳಕಾಯಿ ಹಾಗೂ ವಿವಿಧ ದಿನಸಿ ಪದಾರ್ಥಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.
ಮನೆಗಳಲ್ಲಿ ಪೂಜೆ, ಅಲಂಕಾರ ಹಾಗೂ ಹಬ್ಬದ ಸಾಂಪ್ರದಾಯಿಕ ಆಚರಣೆಗಳಿಗೆ ಬೇಕಾದ ವಸ್ತುಗಳನ್ನು ಖರೀದಿಸಲು ಗ್ರಾಹಕರು ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ. ಯುವಕ&ಯುವತಿಯರು, ಮಕ್ಕಳು ತಮ್ಮ ಪಾಲಕರೊಂದಿಗೆ ಪಟಾಕಿ ಅಂಗಡಿಗಳಿಗೆ ಲಗ್ಗೆ ಇಡುತ್ತಿದ್ದು, ತುನ್ನೂರ ಮೈದಾನದಲ್ಲಿನ ಪಟಾಕಿ ಅಂಗಡಿಗಳು ಗ್ರಾಹಕರಿಂದ ತುಂಬಿಕೊಂಡಿವೆ.
ಹಬ್ಬದ ಹಿನ್ನೆಲೆಯಲ್ಲಿ ಕೆಲವು ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿರುವುದು ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸಿದೆ. ಹಣ್ಣು, ಹೂವು, ತೆಂಗಿನಕಾಯಿ ಸೇರಿ ಹಲವು ವಸ್ತುಗಳ ದರ ಹೆಚ್ಚಳವಾಗಿದ್ದರೂ ಹಬ್ಬದ ಆಚರಣೆಗೆ ಬೇಕಾದ ಸಾಮಗ್ರಿ ಖರೀದಿಸುವುದು ಅನಿವಾರ್ಯ. ಬೆಲೆ ಏರಿಕೆ ಬಗ್ಗೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರೂ ಹಬ್ಬದ ಸಂಭ್ರಮದಲ್ಲಿ ಯಾವುದೇ ಕೊರತೆ ಆಗದಂತೆ ಖರೀದಿಗೆ ಮುಂದಾಗಿದ್ದು ಕಂಡುಬರುತ್ತಿದೆ.
ಇನ್ನೊಂದೆಡೆ, ಹಬ್ಬದ ವ್ಯಾಪಾರವನ್ನೇ ನಂಬಿರುವ ಸಣ್ಣ ಮತ್ತು ಬೀದಿಬದಿ ವ್ಯಾಪಾರಿಗಳಲ್ಲಿ ಉತ್ತಮ ವಹಿವಾಟಿನ ನಿರೀೆ ಮೂಡಿದೆ. ರಸ್ತೆ ಇಕ್ಕೆಲಗಳಲ್ಲಿ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿ ಅಂಗಡಿಗಳು ತಲೆ ಎತ್ತಿದ್ದು, ವ್ಯಾಪಾರ ಗರಿಗೆದರಿದೆ.
ಕುಟುಂಬಸಮೇತ ಮಾರುಕಟ್ಟೆಗೆ ಆಗಮಿಸುತ್ತಿರುವ ಜನರು ಅಗತ್ಯ ವಸ್ತುಗಳನ್ನು ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ವಾಹನಗಳ ಸಂಚಾರ ಹಾಗೂ ಗ್ರಾಹಕರ ದಟ್ಟಣೆಯಿಂದ ಪ್ರಮುಖ ವೃತ್ತಗಳಲ್ಲಿ ಜನಜಂಗುಳಿ ಕಂಡುಬರುತ್ತಿದೆ. ಒಟ್ಟಾರೆ ಬೆಲೆ ಏರಿಕೆ ಸವಾಲಿನ ನಡುವೆಯೂ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಬೆಳಕಿನ ಹಬ್ಬದ ಖರೀದಿ ಭರಾಟೆ ನಗರದ ಮಾರುಕಟ್ಟೆಗಳಿಗೆ ಹೊಸ ಕಳೆ ತಂದಿದೆ.