ಬೀದರ್: ಬೀದರ್- ಬೆಂಗಳೂರು ವಿಮಾನ ಸಂಚಾರ ಸಮಯ ಬದಲಿಸಬೇಕು ಎಂದು ಕಾಂಗ್ರೆಸ್ ಕಿಸಾನ್ ವಿಭಾಗದ ರಾಷ್ಟ್ರೀಯ ಜಂಟಿ ಸಂಯೋಜಕ ಜಾನಸನ್ ಘೋಡೆ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಬೆಂಗಳೂರಿನಲ್ಲಿ ಗುರುವಾರ ಈ ಕುರಿತು ಮನವಿ ಪತ್ರ ಸಲ್ಲಿಸಿದ್ದಾರೆ.
ಸ್ಟಾರ್ ಏರ್ ಸಂಸ್ಥೆ ವಿಮಾನ ಸಂಚಾರ ಸಮಯ ಬದಲಿಸಿದ್ದರಿಂದ ಪ್ರಯಾಣಿಕರಿಗೆ ಅನಾನುಕೂಲವಾಗಿದೆ ಎಂದು ತಿಳಿಸಿದ್ದಾರೆ.
ಹಿಂದೆ ವಿಮಾನ ಬೆಳಿಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಟು, ಬೆಳಿಗ್ಗೆ 7.45ಕ್ಕೆ ಬೀದರ್ ವಿಮಾನ ನಿಲ್ದಾಣಕ್ಕೆ ಬರುತ್ತಿತ್ತು. ಬಳಿಕ 8.15ಕ್ಕೆ ಬೀದರ್‍ನಿಂದ ಹೊರಟು ಬೆಳಿಗ್ಗೆ 9.30ಕ್ಕೆ ಬೆಂಗಳೂರು ತಲುಪುತ್ತಿತ್ತು. ಇದರಿಂದ ಬೀದರ್ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ವ್ಯಾಪಾರಿಗಳು, ಪ್ರವಾಸಿಗರು ಸೇರಿದಂತೆ ಪ್ರಯಾಣಿಕರಿಗೆ ಅನುಕೂಲವಿತ್ತು ಎಂದು ಹೇಳಿದ್ದಾರೆ.
ಸ್ಟಾರ್ ಏರ್ ಸಂಸ್ಥೆ ಇದೀಗ ಏಕಾಏಕಿ ಸಮಯ ಬದಲಿಸಿದೆ. ಸದ್ಯ ವಿಮಾನ ಮಧ್ಯಾಹ್ನ 12.30ಕ್ಕೆ ಬೆಂಗಳೂರಿನಿಂದ ಹೊರಟು, ಮಧ್ಯಾಹ್ನ 1.45ಕ್ಕೆ ಬೀದರ್ ತಲುಪುತ್ತಿದೆ. ನಂತರ ಬೀದರ್‍ನಿಂದ ಮಧ್ಯಾಹ್ನ 2.30ಕ್ಕೆ ಹೊರಟು ಮಧ್ಯಾಹ್ನ 3.30ಕ್ಕೆ ಬೆಂಗಳೂರು ತಲುಪುತ್ತಿದೆ ಎಂದು ತಿಳಿಸಿದ್ದಾರೆ.
ವಿಮಾನದ ಹೊಸ ವೇಳಾಪಟ್ಟಿಯಿಂದ ಪ್ರಯಾಣಿಕರಿಗೆ ಯಾವುದೇ ಲಾಭವಿಲ್ಲ. ಕಚೇರಿ ಕೆಲಸ ಕಾರ್ಯಕ್ಕೆ ಬೆಂಗಳೂರಿಗೆ ತೆರಳುವವರಿಗೆ ತೊಂದರೆಯಾಗುತ್ತಿದೆ. ಕಾರಣ, ಮೊದಲಿನ ವೇಳಾಪಟ್ಟಿಯಂತೆ ವಿಮಾನ ಹಾರಾಟಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.