ಬೀದರ್ ನಲ್ಲಿ ಆರೋಪಿಗಳನ್ನು ಬಂಧಿಸಿದ ಹಿನ್ನಲೆಯಲ್ಲಿ ನಗರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯಿತು.
ರಾಜ್ಯಾದ್ಯಂತ ಬೆಚ್ಚಿಬಿಳಿಸಿದ ಎಸ್‌ಬಿಐ ಎಟಿಎಂ ದರೋಡೆ ಮತ್ತು ಶೂಟೌಟ್ ಪ್ರಕರಣವನ್ನು ಜಿಲ್ಲಾ ಪೊಲೀಸರು ಕೊನೆಗೂ ಬೇಧಿಸಿದ್ದಾರೆ. ಘಟನೆ ನಡೆದು 19 ತಿಂಗಳ ನಂತರ ಪ್ರಮುಖ ಇಬ್ಬರು ಆರೋಪಿಗಳನ್ನು ಬುಧವಾರ ಬಿಹಾರದಲ್ಲಿ ಬಂಧಿಸಿದ್ದಾರೆ.
ಬಿಹಾರದ ವೈಶಾಲಿ ಜಿಲ್ಲೆಯ ದಾಮೋದರ ಗ್ರಾಮದ ಅಮನ್‌ಕುಮಾರ ಸಿಂಗ್ ಮತ್ತು ಅಲೋಕಕುಮಾರ್ ಬಂಧಿತ ಹಂತಕರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ಖಾಕಿ ಪಡೆ ಕೂಬಿಂಗ್ ಕಾರ್ಯಾಚರಣೆ ಮೂಲಕ ಕೃತ್ಯ ಎಸಗಿದ್ದ ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.
ಬಂಧಿತ ಅಂತಾರಾಜ್ಯ ಹಂತಕರಾಗಿರುವ ಈ ಇಬ್ಬರ ವಿರುದ್ಧ ಹಲವು ರಾಜ್ಯಗಳಲ್ಲಿ ಪ್ರಕರಣಗಳಿದ್ದು, ಎರಡ್ಮೂರು ತಿಂಗಳಿಗೊಮ್ಮೆ ಗ್ರಾಮಕ್ಕೆ ಬರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸರು ದಾಳಿ ಮಾಡಿ, ವಶಕ್ಕೆ ಪಡೆದಿದ್ದಾರೆ.
ಮನೆಯಿಂದ ಬೈಕ್ ಮೇಲೆ ಹೊರಗೆ ಬರುತ್ತಿದ್ದಂತೆ ಕಾರಿನಲ್ಲಿದ್ದ ಪೊಲೀಸರ ತಂಡ ದಾಳಿ ನಡೆಸಿ ಇಬ್ಬರನ್ನೂ ಹಿಡಿದಿದ್ದಾರೆ. ಎಸ್‌ಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ಡಿವೈಎಸ್‌ಪಿಗಳಾದ ಸನ್ನದಿ, ನಂದಗಾವೆ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ. ರಾಬರಿ ಪ್ರಕರಣವನ್ನು ಸವಾಲಾಗಿ ಪರಿಗಣಿಸಿದ್ದ ಪೊಲೀಸರು ಬಂಧನಕ್ಕಾಗಿ ಬೇಟೆಯಾಡಿದ್ದು, ಆರೋಪಿಗಳನ್ನು ಗುರುವಾರ ರಾತ್ರಿ ಬೀದರ್ ನಗರಕ್ಕೆ ಕರೆತರಲಾಗುತ್ತಿದೆ.
ಶೂಟೌಟ್ ಪ್ರಕರಣ: 2025ರ ಜ. 16ರಂದು ನಗರದ ಎಸ್‌ಬಿಐ ಬ್ಯಾಂಕ್ ಎದುರಲ್ಲೇ ಹಾಡಹಗಲೇ ಎಟಿಎಂ ವಾಹನಕ್ಕೆ ಹಣ ತುಂಬುತ್ತಿದ್ದ ವೇಳೆ ಬೈಕ್ ಮೇಲೆ ಬಂದಿದ್ದ ಇಬ್ಬರು ಮುಸುಕುಧಾರಿಗಳು ಸಿಎಂಎಸ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿ, ಸಿನಿಮಿಯ ರೀತಿಯಲ್ಲಿ 83 ಲಕ್ಷ ರೂ. ಹಣದ ಬಾಕ್ಸ್ ಲೂಟಿ ಮಾಡಿ ಪರಾರಿಯಾಗಿದ್ದರು. ಸಿಎಂಎಸ್ ಕ್ಯಾಶ್ ಕಸ್ಟೋಡಿಯನ್ ಗಿರಿ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಶಿವಕುಮಾರ ಗುನ್ನಳ್ಳಿ ಗಂಭೀರ ಗಾಯಗೊಂಡಿದ್ದರು. ಈ ಭೀಕರ ಕೃತ್ಯ ನಡೆದು ಒಂದೂವರೆ ವರ್ಷ ಕಳೆದರೂ ದುಷ್ಕರ್ಮಿಗಳು ಪತ್ತೆಯಾಗಿರಲಿಲ್ಲ. ಈ ಪ್ರಕರಣ ಖಾಕಿ ಪಡೆಗೆ ತಲೆನೋವಾಗಿ ಪರಿಣಮಿಸಿತ್ತು.
ದುಷ್ಕರ್ಮಿಗಳ ಬಂಧನಕ್ಕಾಗಿ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಅಲ್ಲದೆ ಆರೋಪಗಳ ಕುರಿತು ಮಾಹಿತಿ ನೀಡಿದರೆ ಐದು ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು.
ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಶೋಧ ಕಾರ್ಯಚರಣೆ ನಡೆಸಿ ಇಬ್ಬರು ದರೋಡೆಕೋರರ ಚಹರೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದವು. ಆದರೆ, ಅವರು ಪತ್ತೆ ಮಾತ್ರ ಆಗಿರಲಿಲ್ಲ. ಇಬ್ಬರ ಫೋಟೋ ಸಹಿತ 'ವಾಂಟೆಡ್' ಪೋಸ್ಟರ್ ಅನ್ನು ಬಿಹಾರದ ಎಲ್ಲೆಡೆ ಅಂಟಿಸಿ, ಬಂಧನಕ್ಕೆ ಜಾಲ ಬೀಸಲಾಗಿತ್ತು. ಆದರೆ, ಈವರೆಗೆ ಪೊಲೀಸರ ಶ್ರಮಕ್ಕೆ ಫಲ ಸಿಕ್ಕಿಲ್ಲ. ದರೋಡೆಕೋರರ ಇರುವಿಕೆಯ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿದಾಗಲೆಲ್ಲ, ಚಳ್ಳೆ ಹಣ್ಣು ತಿನ್ನಿಸಿದ್ದರು. ಇದೀಗ ಇಬ್ಬರು ಆರೋಪಗಳನ್ನು ಬಂಧಿಸಲಾಗಿದೆ.
ಎಟಿಎಂ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಹಿನ್ನಲೆಯಲ್ಲಿ ನಗರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯಿತು. ಬುಧವಾರ ಘಟನೆ ನಡೆದ ಎಸ್ ಬಿಎಂ ಬ್ಯಾಂಕ್ ಎದುರಲ್ಲೇ ಪೊಲೀಸರು ಸಂಭ್ರಮ ಆಚರಿಸಿದ್ದಾರೆ. ಅಧಿಕಾರಿಗಳು ಮತ್ತು ಸಿಬ್ಬಂದಿ, ಜಯ ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು.