ಬೀದರ್ ತಾಲ್ಲೂಕಿನ ಗೋರನಳ್ಳಿ ಸಮೀಪದ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೃಷಿ ಕಲ್ಪ ಹಾಗೂ ಕಾಲೇಜು ನಡುವಿನ ಪರಸ್ಪರ ತಿಳಿವಳಿಕೆ ಒಪ್ಪಂದದ ಪ್ರತಿ ಪ್ರದರ್ಶಿಸಲಾಯಿತು. 
ಬೀದರ್

ಕೃಷಿ ಕಲ್ಪ-ಲಿಂಗರಾಜ ಅಪ್ಪ ಕಾಲೇಜು ಒಪ್ಪಂದ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಸಂಶೋಧನೆ ಹಾಗೂ ಉದ್ಯಮಶೀಲತೆ ಚಟುವಟಿಕೆಗೆ ಪರಸ್ಪರ ಸಹಕಾರಕ್ಕೆ ಬೀದರ್ ತಾಲ್ಲೂಕಿನ ಗೋರನಳ್ಳಿ ಸಮೀಪದ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜು ಮತ್ತು ಕೃಷಿ ಕಲ್ಪ ಸಂಸ್ಥೆ ಮಧ್ಯೆ ಪರಸ್ಪರ ತಿಳಿವಳಿಕೆ ಒಪ್ಪಂದ ಏರ್ಪಟ್ಟಿದೆ.

ಕಾಲೇಜಿನಲ್ಲಿ ಬುಧವಾರ ನಡೆದ ಕೃಷಿ ಕಲ್ಪ ಪರಿಚಯ ಕಾರ್ಯಕ್ರಮದಲ್ಲಿ ಕಾಲೇಜು ಹಾಗೂ ಸಂಸ್ಥೆಯ ಪ್ರಮುಖರು ಒಪ್ಪಂದಕ್ಕೆ ಸಹಿ ಹಾಕಿದರು.

ಕೃಷಿ ಕಲ್ಪ ಸಂಸ್ಥೆಯ ಉಪಾಧ್ಯಕ್ಷ ಈರಣ್ಣ ರೊಟ್ಟೆ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಹೊಸ ಹೊಸ ಆಲೋಚನೆಗಳನ್ನು ಕಾರ್ಯ ರೂಪಕ್ಕೆ ತರಬೇಕು. ಸರ್ಕಾರದ ವಿವಿಧ ಸೌಲಭ್ಯಗಳ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

ನವೀನ ಆಲೋಚನೆಗಳಿಗೆ ಉತ್ತೇಜನ ನೀಡುವ ವಿಧಾನ, ಸರ್ಕಾರದ ವಿವಿಧ ಯೋಜನೆಗಳು, ಹೊಸ ಉದ್ಯಮ ಆರಂಭಿಸಲು ಇರುವ ಅವಕಾಶ ಹಾಗೂ ಕೃಷಿ ಕಲ್ಪದ ಸೌಲಭ್ಯಗಳನ್ನು ವಿವರಿಸಿದರು.

ಪ್ರಾಚಾರ್ಯೆ ವಿನಿತಾ ಪಾಟೀಲ ಮಾತನಾಡಿ, ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ನವೀನ ಚಿಂತನೆ, ಸಂಶೋಧನೆ ಮನೋಭಾವ ಹಾಗೂ ಉದ್ಯಮಶೀಲತೆ ಬೆಳೆಸಲು ಸಹಕಾರಿಯಾಗಿವೆ ಎಂದು ತಿಳಿಸಿದರು.

ಹೊಸ ಯೋಜನೆ ಹಾಗೂ ಸರ್ಕಾರದ ಅನುದಾನದ ಯೋಜನೆಗಳಲ್ಲಿ ಪಾಲ್ಗೊಳ್ಳಲು ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ಹಾಗೂ ಸಹಕಾರ ನೀಡಲಿದೆ ಎಂದು ಹೇಳಿದರು.

ಯುವ ಎಂಟರ್‍ಪ್ರಿನರ್‍ಶಿಪ್ ವಿಭಾಗದ ಮುಖ್ಯಸ್ಥ ಅಭಿನಂದನ್ ಕವಳೆ ಮಾತನಾಡಿದರು. ಯುವ ಎಂಟರ್‍ಪ್ರಿನರ್‍ಶಿಪ್ ಅಸೋಸಿಯೇಟ್ ಬಸವರಾಜ, ತರಬೇತಿ ಮತ್ತು ನೇಮಕಾತಿ ಅಧಿಕಾರಿ ಪ್ರೊ. ವಿವೇಕಾನಂದ ಬಿರಾದಾರ ಇದ್ದರು. ಸಂಗಪ್ಪ ರಾಜೇಶ್ವರ ನಿರೂಪಿಸಿದರು.