ಬೀದರ್‍ನ ಜಿಲ್ಲಾ ಕನ್ನಡ ಭವನದಲ್ಲಿ ನಡೆದ ಲಿಂ. ರುಕ್ಮೋದ್ದಿನ್ ಇಸ್ಲಾಂಪುರ ಸ್ಮರಣಾರ್ಥ ‘ನೆನಪಿನಂಗಳದಲ್ಲಿ ನಮ್ಮೊಂದಿಗೆ ನೀವು’ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಗುರುನಾಥ ಅಕ್ಕಣ್ಣ ಉದ್ಘಾಟಿಸಿದರು
ಬೀದರ್: ಕುಲ, ಗೋತ್ರ, ಜಾತಿ, ಮತ, ಪಂಥ ಮತ್ತು ಧರ್ಮಗಳಾಚೆ ಯೋಚಿಸಿದ ಜಿಲ್ಲೆಯ ಏಕೈಕ ಮುಸ್ಲಿಮ್ ಸೃಜನಶೀಲ ಸಾಹಿತಿ ರುಕ್ಮೋದ್ದಿನ್ ಇಸ್ಲಾಂಪುರ ಎಂದು ಹಿರಿಯ ಸಾಹಿತಿ ಗುರುನಾಥ ಅಕ್ಕಣ್ಣ ಹೇಳಿದರು.
ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಜಿಲ್ಲಾ ಕನ್ನಡ ಭವನದಲ್ಲಿ ಶನಿವಾರ ‘ಮರೆಯಲಾಗದ ಮಹನೀಯರು’ ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಿದ್ದ ಲಿಂ. ರುಕ್ಮೋದ್ದಿನ್ ಇಸ್ಲಾಂಪುರ ಸ್ಮರಣಾರ್ಥ ‘ನೆನಪಿನಂಗಳದಲ್ಲಿ ನಮ್ಮೊಂದಿಗೆ ನೀವು’ ಮಾಲಿಕೆಯ ಹತ್ತನೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು ಹತ್ತು ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆದರೂ ಯಾವುದೇ ಹಮ್ಮು-ಬಿಮ್ಮುಗಳಿಲ್ಲದ ಸರಳ, ನೇರ ನಡೆ-ನುಡಿಯ ಕನ್ನಡದ ಪ್ರತಿಭಾವಂತ ಲೇಖಕರಾಗಿದ್ದರು. ಕಾವ್ಯ, ಕಥೆ, ಕಾದಂಬರಿ, ಲೇಖನಗಳ ಮೂಲಕ ಸಮಾಜದಲ್ಲಿ ನೆಲೆ ನಿಂತ ಬಡತನ, ಅಜ್ಞಾನ, ಮೂಢನಂಬಿಕೆ, ಜಾತೀಯತೆಗಳಿಗೆ ಸೆಡ್ಡು ಹೊಡೆದಿದ್ದರು. ಹತ್ತಕ್ಕೂ ಹೆಚ್ಚು ವಿವಿಧ ಬಗೆಯ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಕನ್ನಡಿಗರ ಹೃದಯಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದರು.
ಔರಾದ್ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಓಂಪ್ರಕಾಶ ದಡ್ಡೆ ಮಾತನಾಡಿ, ಕೋಟಿಗೊಬ್ಬ ಕವಿ, ಆಧುನಿಕ ಕಾಲದ ಕಬೀರ, ಸೂಫಿ ಸಂತರ ಸಾಲಿನಲ್ಲಿ ನಿಲ್ಲುವಂತಹ ವ್ಯಕ್ತಿತ್ವ ರುಕ್ಮೋದ್ದಿನ್ ಅವರದ್ದು ಎಂದು ಹೇಳಿದರು.
ಡಾ. ರಾಮಚಂದ್ರ ಗಣಾಪುರ ಮಾತನಾಡಿ, ಅವರೊಬ್ಬ ಪರಿಪೂರ್ಣ ವ್ಯಕ್ತಿ, ನೇರಾ ನೇರ ಮಾತನಾಡುವ ಗುಣ ಹೊಂದಿದ್ದರು. ಸತ್ಯಂ, ಶಿವಂ, ಸುಂದರಂ ಎಂಬ ಪ್ರಶಸ್ತಿಯನ್ನು ಸ್ವತಃ ಸ್ಥಾಪಿಸಿ, ಪ್ರತಿ ವರ್ಷ ಆಗಸ್ಟ್ 15 ರಂದು ಲಾಲಧರಿಯಲ್ಲಿ ಉತ್ತಮ ಲೇಖಕ, ನವ್ಯಕ್ತಿಗಳಿಗೆ ಕೊಡ ಮಾಡುತ್ತಿದ್ದರು. ಬದುಕಿನ ಅದೆಷ್ಟೋ ದುಗುಡು-ದುಮ್ಮಾನ, ನೋವು-ನಲಿವುಗಳ ಮಧ್ಯೆಯೂ ತಮ್ಮ ಬರವಣಿಗೆಯನ್ನು ಎಂದೂ ನಿಲ್ಲಿಸಿರಲಿಲ್ಲ ಎಂದು ತಿಳಿಸಿದರು.
ಡಾ. ರಘುಶಂಖ ಭಾತಂಬ್ರಾ ಮಾತನಾಡಿ, ಅವರೊಬ್ಬ ಸಜ್ಜನ ವ್ಯಕ್ತಿಯಾಗಿದ್ದರು. ಸಮಾಜ ಸ್ಯಾಸ್ಥ್ಯದ ಪ್ರಜ್ಞೆಯೊಂದಿಗೆ ಬರೆಯುವಂಥವರಾಗಿದ್ದರು. ಪ್ರತಿ ಪುಸ್ತಕವನ್ನೂ ಸಾಲ ಮಾಡಿಕೊಂಡೇ ಮುದ್ರಣ ಮಾಡಿಸುತ್ತಿದ್ದರು. ಮುಸ್ಲಿಂ ಆಗಿದ್ದರೂ ,ಹಿಂದು ಧರ್ಮದ ಬಗ್ಗೆ ಅಪಾರ ಒಲವು ಹೊಂದಿದ್ದರು. ಸಾಹಿತ್ಯ ಸೇವೆಗಾಗಿಯೇ ತಮ್ಮ ಬದುಕಿನಲ್ಲಿ ಅತಿಹೆಚ್ಚು ನೋವುಗಳನ್ನು ಅನುಭವಿಸಿದರು ಎಂದು ಹೇಳಿದರು.
ಸಾಹಿತಿ ಪಾರ್ವತಿ ವಿ. ಸೋನಾರೆ ಮಾತನಾಡಿ, ಸಾಹಿತಿಗಳು ಬದುಕಿರುವುದೇ ಅವರ ಕೃತಿಗಳ ಮೂಲಕ. ಕವಿಯಾದವನ ಮನಸ್ಸು ಮತ್ತು ಹೃದಯ ಎರಡೂ ವಿಶಾಲತೆಯಿಂದ ಕೂಡಿರಬೇಕು. ಅಂತಹ ಹೃದಯ ವೈಶಾಲ್ಯತೆ ರುಕ್ಮೋದ್ದಿನ್ ಇಸ್ಲಾಂಪುರ ಅವರದ್ದಾಗಿತ್ತು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಈ ಹಿಂದೆ ನಡೆದ ಒಂಬತ್ತು 'ಮರೆಯಲಾಗದ ಮಹನೀಯರು' ಕಾರ್ಯಕ್ರಮಗಳು ಸಾಹಿತಿಗಳ ಮನೆಗಳಲ್ಲಿಯೇ ಆಯೋಜಿಸಲಾಗಿತ್ತು. ಅನಾನುಕೂಲತೆಗಳ ಕಾರಣದಿಂದ ಹತ್ತನೆಯ ಕಾರ್ಯಕ್ರಮ ಭವನದಲ್ಲಿ ಆಯೋಜಿಸಲಾಗಿದೆ. ಈ ಹಿಂದೆ 'ಹೊಸ ಓದು' ಕಾರ್ಯಕ್ರಮಕ್ಕಾಗಿ ರಕ್ಮೋದ್ದಿನ್ ಇಸ್ಲಾಂಪುರ ವಿರಚಿತ ‘ಸುಮತಿ’ ಕಾದಂಬರಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಹವಾಮಾನ ವೈಪರೀತ್ಯ ಮತ್ತು ನಿರಂತರ ಮಳೆಯ ಕಾರಣ ಅನಿವಾರ್ಯವಾಗಿ ಕಾರ್ಯಕ್ರಮ ರದ್ದಾಯಿತು. ದುರ್ದೈವವಶಾತ್ ಕೆಲವೇ ದಿನಗಳಲ್ಲಿ ರಸ್ತೆ ಅಪಘಾತದಲ್ಲಿ ಅವರು ವಿಧಿವಶರಾದರು. ‘ಹೊಸ ಓದು’ ಬದಲಾಗಿ ‘ನೆನೆವ ಮನಗಳು’ ಕಾರ್ಯಕ್ರಮ ಆಯೋಜಿಸುವಂತಾಗಿದೆ ಎಂದು ಭಾವುಕರಾಗಿ ನುಡಿದರು.
ಬೀದರ್ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಎಂ.ಮಚ್ಚೆ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಷತ್ತು ಯಾವತ್ತೂ ಸಾಹಿತಿಗಳ, ಸಾಹಿತ್ಯ ಪ್ರಕಾರಗಳ ಕುರಿತು ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಅರ್ಹ ಸಾಹಿತಿ ಮತ್ತು ಕೃತಿಗಳ ಕುರಿತು ಕಾಲಕಾಲಕ್ಕೆ ವಿಶೇಷ ಉಪನ್ಯಾಸ, ವಿಚಾರ ಸಂಕಿರಣಗಳನ್ನು ಆಯೋಜಿಸುವ ಮೂಲಕ ಕನ್ನಡ ಸಾರಸತ್ವ ಲೋಕಕ್ಕೆ ಪರಿಚಯಿಸುವ ಕೆಲಸ ಮಾಡುತ್ತಾ ಬಂದಿದೆ. ಮುಂದೆಯೂ ಮಾಡಲಿದೆ ಎಂದು ತಿಳಿಸಿದರು.
ಪ್ರಮುಖರಾದ ವಿಜಯಕುಮಾರ ಸೋನಾರೆ. ಡಾ. ರಾಜಕುಮಾರ ಅಲ್ಲೂರೆ, ಜಗನ್ನಾಥ ಕಮಲಾಪುರೆ, ಕಲ್ಯಾಣರಾವ್ ಚಳಕಾಪುರೆ, ಸಂಜುಕುಮಾರ ಅಲ್ಲೂರೆ, ಅಶೋಕ ದಿಡಗೆ ಮತ್ತಿತರರು ಪಾಲ್ಗೊಂಡಿದ್ದರು.
ಜಿಲ್ಲಾ ಖಜಾನೆ ನಿರ್ದೇಶಕ ಮಾಣಿಕ ನೇಳಗೆ ಅವರು ರುಕ್ಮೋದ್ದಿನ್ ಇಸ್ಲಾಂಪುರ ಅವರ ಕುರಿತು ಭಾವಪೂರ್ಣವಾಗಿ ಕವನ ವಾಚನ ಮಾಡಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಂ.ಎಸ್.ಮನೋಹರ ಸ್ವಾಗತಿಸಿದರು. ಬೀದರ್ ತಾಲ್ಲೂಕು ಗೌರವ ಕಾರ್ಯದರ್ಶಿ ಉಮೇಶ ಜಾಬಾ ನಿರೂಪಿಸಿದರು. ಕಲ್ಯಾಣರಾವ್ ಚಳಕಾಪುರೆ ವಂದಿಸಿದರು.