ಬೀದರ್:
ಕ್ಯಾನ್ಸರ್, ಶ್ವಾಸಕೋಶದ ಕಾಯಿಲೆ, ಹೃದಯ ಸಂಬAಧಿ ಕಾಯಿಲೆ, ಪಾರ್ಶ್ವವಾಯು ಸೇರಿದಂತೆ
ಅನೇಕ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗುತ್ತಿರುವ ತಂಬಾಕು ಉತ್ಪನ್ನಗಳ ಮಾರಾಟ
ನಿಷೇಧಿಸಲು ರಾಜ್ಯ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಬೀದರ ನಾಗರಿಕ ಸನ್ಮಾರ್ಗ
ಸಮಿತಿ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಇಲ್ಲಿ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ನಡೆದ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಮಲು
ಪದಾರ್ಥ ಸೇರಿಸಿರುವುದು ಕಂಡು ಬಂದಲ್ಲಿ ಪಾನ್ ಮಸಾಲ, ಗುಟ್ಕಾ ಮುಂತಾದವುಗಳನ್ನು
ನಿಷೇಧಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿರುವುದು
ಸ್ವಾಗತಾರ್ಹವಾಗಿದೆ. ಮುಖ್ಯಮಂತ್ರಿಯವರ ಹೇಳಿಕೆಯು ಜನಾರೋಗ್ಯ ರಕ್ಷಣೆ ವಿಷಯದಲ್ಲಿ
ಸರಕಾರದ ಬದ್ಧತೆ ಮತ್ತು ಕಾಳಜಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಸರಕಾರ ಅಪಾರ ಪ್ರಮಾಣದ ಹಣ ವೆಚ್ಚ
ಮಾಡುತ್ತಿದೆ. ಇದರ ಜೊತೆಗೆ ರೋಗಕ್ಕೆ ತುತ್ತಾಗುತ್ತಿರುವ ಕುಟುಂಬಗಳೂ ಚಿಕಿತ್ಸೆಗೆ
ದೊಡ್ಡ ಮೊತ್ತ ಖರ್ಚು ಮಾಡುತ್ತಿವೆ. ಈ ಮೊತ್ತಕ್ಕೆ ಹೋಲಿಸಿದ್ದಲ್ಲಿ ಗುಟ್ಕಾ, ಪಾನ್
ಮಸಾಲಾ ಮುಂತಾವುಗಳ ಮಾರಾಟದಿಂದ ತೆರಿಗೆ ರೂಪದಲ್ಲಿ ಬರುತ್ತಿರಬಹುದಾದ ಆದಾಯ ಸಣ್ಣದು
ಎನ್ನುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಡಾ. ಅಬ್ದುಲ್ ಖದೀರ್
ಕೋರಿದರು.
ಸ್ವಯಂ ಸೇವಾ ಸಂಸ್ಥೆಗಳು, ಸಂಘ ಸಂಸ್ಥೆಗಳೂ ಈ ಕಾರ್ಯದಲ್ಲಿ ಕೈ ಜೋಡಿಸಬೇಕು. ನಗರ,
ಗ್ರಾಮೀಣ ಹೀಗೆ ಯಾವುದೇ ಭೇದ ಇಲ್ಲದಂತೆ ಎಲ್ಲೆಡೆ ಜಾಗೃತಿ ಮೂಡಿಸುವ ಕಾರ್ಯ
ನಡೆಯಬೇಕು. ಸರಕಾರವೂ ಸ್ಪಂದಿಸಬೇಕು. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಬೆಂಬಲ
ನೀಡಬೇಕು ಎಂದು ಡಾ. ಖದೀರ್ ಹೇಳಿದರು.
ಜಾಗತಿಕವಾಗಿ ತಂಬಾಕು ಬಳಕೆಯು ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಬೆದರಿಕೆಗಳಲ್ಲಿ
ಒಂದಾಗಿದೆ. ಇದು ಜೀವಹಾನಿಗೆ ಮಾತ್ರವಲ್ಲ, ಭಾರೀ ಪ್ರಮಾಣದ ಆರ್ಥಿಕ ವೆಚ್ಚಕ್ಕೂ
ಕಾರಣವಾಗುತ್ತಿದೆ. ತಂಬಾಕು ಸೇವನೆಯಿಂದ ಬರುವ ಎಲ್ಲ ರೀತಿಯ ಕಾಯಿಲೆಗಳಿಂದ
ಉಂಟಾಗುತ್ತಿರುವ ಆರ್ಥಿಕ ವೆಚ್ಚವು ನೂರಾರು ಕೋಟಿ ರೂ.ಗಳಾಗಿದೆ ಎಂದು ಸಮಿತಿಯ ಪ್ರಧಾನ
ಕಾರ್ಯದರ್ಶಿ ಅಶೋಕ ವಡಗಾವೆ ಹೇಳಿದರು.
ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯು ಗುಟ್ಕಾ, ಪಾನ್ ಮಸಾಲಾ ಮುಂತಾದವುಗಳ ಸೇವನೆ
ವಿರುದ್ಧ ಜನಜಾಗೃತಿ ಮೂಡಿಸುತ್ತಿದೆ. ಹಳ್ಳಿಗಳಿಗೆ ಭೇಟಿ ನೀಡಲಾಗುತ್ತಿದೆ.
ವ್ಯಸನದಿಂದ ಆಗುತ್ತಿರುವ ಅನಾರೋಗ್ಯ ಮತ್ತು ಆರ್ಥಿಕ ನಷ್ಟ ಕುರಿತು ಮನವರಿಕೆ
ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಒಕ್ಕೂಟದ ಅದ್ಯಕ್ಷ ಡಾ. ರಾಜಶೇಖರ ಸೇಡಮಕರ್ ಮಾತನಾಡಿ,
ವಿಶ್ವದಲ್ಲೇ ಅತಿ ಹೆಚ್ಚು ಕ್ಯಾನ್ಸರ್ ಪ್ರಕರಣ ದಾಖಲಾಗುವ ದೇಶಗಳಲ್ಲಿ ಭಾರತ ಸೇರಿದೆ.
ಗುಟ್ಕಾ, ಜರ್ದಾ, ಖೈನಿ, ತಂಬಾಕು ಮಿಶ್ರಿತ ಪಾನ್ ಮಸಾಲಾ ಸೇವೆನೆಯು ಕ್ಯಾನ್ಸರ್
ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದರು.
ಗುಟ್ಕಾದಲ್ಲಿರುವ ವಿಷಕಾರಿ ರಾಸಾಯನಿಕಗಳು ಗಂಟಲು ಮತ್ತು ಅನ್ನನಾಳವನ್ನು ದಾಟಿ
ಹೊಟ್ಟೆಯನ್ನು ತಲುಪುತ್ತವೆ. ಈ ಮಾರ್ಗದಲ್ಲಿರುವ ಅಂಗಗಳಿಗೂ ಹಾನಿಯುಂಟು ಮಾಡುತ್ತವೆ.
ಹೊಟ್ಟೆ ಉರಿ, ಹೊಟ್ಟೆಯ ಒಳಚರ್ಮದ ಉರಿಯೂತ ಉಂಟಾಗಬಹುದು. ತಂಬಾಕಿನಲ್ಲಿರುವ ನಿಕೋಟಿನ್
ಮೆದುಳಿನ ರಾಸಾಯನಿಕ ಕ್ರಿಯೆಯನ್ನು ಬದಲಾಯಿಸುತ್ತದೆ ಎಂದು ಹೇಳಿದರು.
ಗುಟ್ಕಾ ಸೇವನೆಯ ಪರಿಣಾಮ ಮೊದಲ ದಿನವೇ ಕಾಣಿಸುವುದಿಲ್ಲ. ಆದರೆ ಪ್ರತಿ ಬಾರಿಯ
ಸೇವನೆಯು ಜೀವಕೋಶಗಳ ಮೇಲೆ ಸಣ್ಣ ಗಾಯವನ್ನು ಉಂಟುಮಾಡುತ್ತದೆ. ವರ್ಷಗಳ ನಂತರ ಆ ಸಣ್ಣ
ಗಾಯಗಳೇ ಕ್ಯಾನ್ಸರ್‌ನಂತಹ ಜೀವಕ್ಕೆ ಅಪಾಯಕಾರಿಯಾದ ಕಾಯಿಲೆಯಾಗುತ್ತವೆ. ಗುಟ್ಕಾ ಒಂದೇ
ದಿನದಲ್ಲಿ ಕೊಲ್ಲುವುದಿಲ್ಲ. ಆದರೆ, ಪ್ರತಿದಿನ ದೇಹದ ಒಂದು ಭಾಗವನ್ನು ನಿಧಾನವಾಗಿ
ಕೊಲ್ಲುತ್ತಾ ಹೋಗುತ್ತದೆ ಎಂದು ಎಚ್ಚರಿಸಿದರು.
ಕರ್ನಾಟಕ ವೃತ್ತಿಪರ ಸಿವಿಲ್ ಎಂಜಿಯರುಗಳ ಪರಿಷತ್ತಿನ ಸದಸ್ಯ ಹಾವಶೆಟ್ಟಿ ಪಾಟೀಲ್
ಮಾತನಾಡಿ, ವಿದ್ಯಾರ್ಥಿಗಳು, ಕಾರ್ಖಾನೆ- ಕಟ್ಟಡ ನಿರ್ಮಾಣ ಕಾರ್ಮಿಕರು ಸೇರಿದಂತೆ
ಎಲ್ಲೆಡೆ ಈ ವ್ಯಸನ ಹರಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸ್ನೇಹಿತರ ಒತ್ತಡ,
ಕುತೂಹಲ, ಜಾಹೀರಾತುಗಳ ಪರೋಕ್ಷ ಪ್ರಭಾವ, ಸುಲಭ ಲಭ್ಯತೆ ಮತ್ತು ಕಡಿಮೆ ಬೆಲೆ ಇವು
ಯುವಕರನ್ನು ಈ ವ್ಯಸನದತ್ತ ಸೆಳೆಯುತ್ತಿವೆ ಎಂದು ಹೇಳಿದರು.
ಒಂದು ಚಿಕ್ಕ ಪ್ಯಾಕೆಟ್‌ನಿಂದ ಆರಂಭವಾಗುವ ಗುಟ್ಕಾ ಸೇವನೆ ಅಭ್ಯಾಸವು ನಂತರ ಸಾವಿರಾರು
ರೂಪಾಯಿಗಳನ್ನು ಖರ್ಚು ಮಾಡುವ ವ್ಯಸನವಾಗುತ್ತಿದೆ. ನಂತರ ಲಕ್ಷಾಂತರ ರೂಪಾಯಿಗಳ
ಚಿಕಿತ್ಸಾ ವೆಚ್ಚಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚೆನಶೆಟ್ಟಿ ಮಾತನಾಡಿ, ಯುವಕರು
ಗುಟ್ಕಾ, ಪಾನ್ ಮಸಾಲಾ ಸೇವನೆ ವ್ಯಸನಕ್ಕೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿ
ಎಂದರು. ಯುವಕರು ದೇಶದ ಭವಿಷ್ಯ. ಗುಟ್ಕಾ ಸೇವನೆಯಂತ ವ್ಯಸನಗಳಿಂದ ಯುವಕರನ್ನು ದೂರ
ಇಡುವ ಕಾರ್ಯ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಬೇಕಾಗಿದೆ ಎಂದರು.
ಸಮಿತಿಯ ಪದಾಧಿಕಾರಿಗಳು, ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಗುಟ್ಕಾ ನಿಷೇಧ
ಕುರಿತಂತೆ ಮುಖ್ಯಮಂತ್ರಿಯವರ ಹೇಳಿಕೆಯನ್ನು ಸ್ವಾಗತಿಸಲಾಯಿತು.