ಬಸವಕಲ್ಯಾಣ (ಬೀದರ್): ಬಕ್ರೀದ್ ನಿಮಿತ್ತ ಕುರ್ಬಾನಿ ಕೊಡುತ್ತಿದ್ದ ವೇಳೆ ಗದ್ದಲ ಮಾಡಿದ ಸಂಬಂಧ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಅಪರ ಮುಖ್ಯ ನ್ಯಾಯಿಕ ದಂಡಾಂಧಿಕಾರಿಗಳ (ಜನಪ್ರತಿನಿಧಿಗಳ) ನ್ಯಾಯಾಲಯ, ಶಾಸಕ ಶರಣು ಸಲಗರ ಸೇರಿದಂತೆ ಎಲ್ಲ 9 ಜನರನ್ನು ನಿರ್ದೋಷಿಗಳು ಎಂದು ಪ್ರಕಟಿಸಿ, ಬುಧವಾರ ತೀರ್ಪು ನೀಡಿದೆ.
ಇಲ್ಲಿನ ಹಿರೇಮಠ ಕಾಲನಿ ಮನೆಯೊಂದರಲ್ಲಿ ಬಕ್ರೀದ್ ನಿಮಿತ್ತ ಕುರ್ಬಾನಿ ಮಾಡಲಾಗುತ್ತಿದೆ ಎಂದು ದೂರಿ, 2023ರ ಜು.1ರಂದು ಶಾಸಕ ಸಲಗರ ಹಾಗೂ ಇತರರು ಸ್ಥಳಕ್ಕೆ ಭೇಟಿ ನೀಡಿದ್ದರು. ಪ್ರಾಣಿ ಬಲಿ ನೀಡುವುದು ಅಪರಾಧ. ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಶಾಸಕರು ಒತ್ತಾಯಿಸಿದ್ದರು. ನಮ್ಮ ಧರ್ಮದ ಸಂಪ್ರದಾಯದಂತೆ ಕುರ್ಬಾನಿ ಕೊಡುವಾಗ, ಅವ್ಯಾಚ ಶಬ್ಧಗಳಿಂದ ಬೈದು, ಜೀವ ಬೆದರಿಕೆ ಹಾಕಿ, ಮತೀಯ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಶಾಸಕರು ಮತ್ತು ಇತರರ ವಿರುದ್ಧ ಇಲ್ಲಿನ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಸಂಬಂಧ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಸಂದೀಪ್ ಪಾಟೀಲ್, ಭಾರತೀಯ ದಂಡ ಸಂಹಿತೆಯ ಕಲಂ 143, 147, 448, 504, 506, 298 ಸಹ ಕಲಂ 149ರಡಿಯಲ್ಲಿನ ಅಪರಾಧಕ್ಕೆ ಸಂಬಂಧಿದಂತೆ ಶಾಸಕ ಸಲಗರ
ಸೇರಿದಂತೆ ಎಲ್ಲ 9 ಜನರು ನಿರ್ದೋಷಿಗಳೆಂದು ಆದೇಶ ನೀಡಿದ್ದಾರೆ. ಶಾಸಕ ಸಲಗರ ಸೇರಿದಂತೆ ಎಲ್ಲ 9 ಜನರ ಪರ ಹೈಕೋರ್ಟ್ ವಕೀಲ ಅಮೀತ್ ಸಾಹುಕಾರ್ ಧನ್ನೂರ (ಆರ್) ವಾದ ಮಂಡಿಸಿದರು.