ಭಾಲ್ಕಿ ಚನ್ನಬಸವಾಶ್ರಮದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ೧೩೬ನೇ ಜಯಂತ್ಯುತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು. ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ಶಿವಯೋಗೀಶ್ವರ ಸ್ವಾಮೀಜಿ, ಶ್ರೀ ಚನ್ನವೀರ ಸ್ವಾಮೀಜಿ, ಶ್ರೀ ಶಿವಪ್ರಸಾದ ಸ್ವಾಮೀಜಿ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಶಶಿಧರ ಕೋಸಂಬೆ ಇತರರಿದ್ದರು.
ಭಾಲ್ಕಿ: ಅಪ್ಪಟ ಬಸವಣ್ಣನವರ ಅನುಯಾಯಿ ಆಗಿದ್ದ ಶತಾಯುಷಿ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ತಮ್ಮ ಇಡೀ ಬದುಕು ಬಸವತತ್ವ ಪ್ರಚಾರ ಮತ್ತು ಪ್ರಸಾರಕ್ಕೆ ಮುಡಿಪಾಗಿಟ್ಟಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನ ಸೋಮವಾರ ಆಯೋಜಿಸಿದ್ದ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ೧೩೬ನೆಯ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ದೂರದೃಷ್ಟಿ ಹೊಂದಿದ್ದ ಪೂಜ್ಯರು ಗಡಿಭಾಗದ ಸಮಗ್ರ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಅಸ್ತç ಎಂಬುದನ್ನು ಅರಿತು ೧೯೩೬ರಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಆರಂಭಿಸಿದ್ದರು. ಪೂಜ್ಯರ ಸೇವೆ ಕೇವಲ ಬಸವತತ್ವ ಪ್ರಚಾರ ಪ್ರಸಾರಕ್ಕೆ ಸೀಮಿತವಾಗಿರದೆ ಗಡಿಭಾಗವನ್ನು ಕನ್ನಡ ನೆಲದಲ್ಲಿ ಉಳಿಸಲು ಹೋರಾಟ ನಡೆಸಿದ್ದರು ಎಂದರು.
ಮಾತಿನ ಸದ್ದು ದೂರ ಕೇಳಿಸುತ್ತದೆ, ಕೆಲಸದ ಸದ್ದು ಅದಕ್ಕಿಂತಲೂ ದೂರ ಕೇಳಿಸುತ್ತದೆ. ಹಾಗಾಗಿ ಪೂಜ್ಯರು ಮಾತಿನ ಸ್ವಾಮೀಜಿ ಆಗಿರದೆ ಕೆಲಸದ ದಾರ್ಶನಿಕರು ಆಗಿದ್ದರು. ಇಂಥ ಪೂಜ್ಯರು ಸಿಕ್ಕಿದ್ದು ನಮ್ಮೆಲ್ಲರ ಸೌಭಾಗ್ಯ. ಅವರ ವಿಚಾರಧಾರೆಗಳನ್ನು ಎಲ್ಲರೂ ಅನುಸರಿಸಿ ಭವ್ಯ, ಸುಂದರ ಬದುಕು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಬದುಕು ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ. ಪೂಜ್ಯರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ ಅನುಪಮವಾಗಿದೆ ಎಂದರು.
ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ, ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ಶಿವಯೋಗೀಶ್ವರ ಸ್ವಾಮೀಜಿ, ಶ್ರೀ ಚನ್ನವೀರ ಸ್ವಾಮೀಜಿ, ಶ್ರೀ ಶಿವಪ್ರಸಾದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿದರು. ಶ್ರೀ ಶರಣಬಸವ ಸ್ವಾಮೀಜಿ ಅನುಭಾವ ನೀಡಿದರು. ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ ಬಸವಗುರು ಪೂಜೆ ನೆರವೇರಿಸಿದರು.
ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಡಿ.ಕೆ. ಸಿದ್ರಾಮ, ಹಿರಿಯ ನ್ಯಾಯವಾದಿ ರಾಜಶೇಖರ ಅಷ್ಟೂರೆ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಶಿವಶಂಕರ ಕಾಮಶೆಟ್ಟಿ, ಕರ್ನಾಟಕ ರಾಜ್ಯ ಮಹಿಳಾ ಮಂಡಳ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ನೀಲಮ್ಮ ವಿಕೆ ಪಾಟೀಲ್, ಯುವ ಮುಖಂಡರಾದ ರವಿ ಮೀಸೆ, ಪ್ರಕಾಶ ಟೊಣ್ಣೆ, ಬಂಡೆಪ್ಪ ಕಂಟೆ, ಪ್ರಕಾಶ ಘೂಳೆ, ಬಸವ ಬಳಗದ ಜಿಲ್ಲಾಧ್ಯಕ್ಷ ಡಾ.ಸಂಜುಕುಮಾರ ಜುಮ್ಮಾ ಇತರರಿದ್ದರು. ಹಾಸ್ಯ ಕಲಾವಿದ ನವಲಿಂಗ ಪಾಟೀಲ್ ನಿರೂಪಣೆ ಮಾಡಿ ವಂದಿಸಿದರು.
ಡಾ.ದುರ್ಗೆಗೆ ಕಾಯಕ ಪ್ರಶಸ್ತಿ ಪ್ರದಾನ: ಬಸವಕಲ್ಯಾಣದ ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪ ಕಾರ್ಯದರ್ಶಿ ಡಾ.ಎಸ್.ಬಿ. ದುರ್ಗೆ ಅವರಿಗೆ ೨೦೨೫ರ ಡಾ.ಚನ್ನಬಸವ ಪಟ್ಟದ್ದೇವರು ಕಾಯಕ ಪ್ರಶಸ್ತಿಯನ್ನು ದಾಸೋಹಿ ಎನ್ನೆಸ್ಸೆಸ್ಕೆ ಮಾಜಿ ಅಧ್ಯಕ್ಷ ಡಿ.ಕೆ.ಸಿದ್ರಾಮ ನೀಡಿ ಗೌರವಿಸಿದರು.
ಗ್ರಂಥ ಲೋಕಾರ್ಪಣೆ: ಸಾಹಿತಿ ಸುನಿತಾ ದಾಡಗೆ(ಗೌಡರ) ಬರೆದ ಕನ್ನಡದ ನಂದಾದೀಪ, ಚನ್ನಬಸವೇಶ್ವರ ಗುರುಕುಲ ಸಮುಚ್ಛಯದ ಅಧೀಕ್ಷಕ ಗಣಪತಿ ಭೂರೆ ಬರೆದ ಅಕ್ಷರ ಲೋಕದ ನಕ್ಷತ್ರ ಗ್ರಂಥ, ಗುರುಪ್ರಸಾದ ಚಂದ್ರಶೇಖರ ನಿರ್ದೇಶನದಲ್ಲಿ ಹೊರತಂದ ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ ಎಂಬ ಕಿರುಚಿತ್ರ ಹಾಗೂ ಎನ್ನೆಸ್ಸೆಸ್ಕೆ ಮಾಜಿ ಅಧ್ಯಕ್ಷ ಡಿ.ಕೆ.ಸಿದ್ರಾಮ ಪುಸ್ತಕ ಬಿಡುಗಡೆಗೊಳಿಸಿದರು.
ವಿವಿಧ ಕ್ಷೇತ್ರದ ಸಾಧಕರಿಗೆ ವಿಶೇಷ ಸನ್ಮಾನ : ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತರ ಶರಣಪ್ಪ ಸುಲಗುಂಟೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ, ವಿದ್ಯುತ್ ಮಂಡಳಿ ಇಂಜಿನಿಯರ್‌ಗಳ ಸಂಘದ ಶಾಶ್ವತ ನಿರ್ದೇಶಿತ ಸದಸ್ಯ ವೀರಭದ್ರಪ್ಪ, ಉಪಾಧ್ಯಕ್ಷ ಸಚಿನ್ ಜಿ.ಎಚ್., ಕೇಂದ್ರ ಸಮಿತಿ ಸದಸ್ಯ ರಮೇಶ ಪಾಟೀಲ್, ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಸದಸ್ಯ ಮಹೇಶ ಘಾಳೆ ಮತ್ತು ಗುರುಪ್ರಸಾದ ಚಂದ್ರಶೇಖರ ಅವರಿಗೆ ಶ್ರೀಮಠದ ಪರವಾಗಿ ವಿಶೇಷ ಸನ್ಮಾನ ಮಾಡಲಾಯಿತು.
ಬೆಳ್ಳಂಬೆಳ್ಳಗೆ ಬಸವ ನಡಿಗೆ: ಬೆಳಗ್ಗೆ ೬.೩೦ಕ್ಕೆ ಹಿರೇಮಠ ಸಂಸ್ಥಾನದಿಂದ ಶುರುವಾದ ಬಸವ ನಡಿಗೆ ವಿವಿಧ ವೃತ್ತ, ಮುಖ್ಯ ರಸ್ತೆ ಮೂಲಕ ಚನ್ನಬಸವಾಶ್ರಮ ಪರಿಸರಕ್ಕೆ ಆಗಮಿಸಿ ಸಮಾವೇಶಗೊಂಡಿತು. ಮೈಕೊರೆಯುವ ಚಳಿ ಮಧ್ಯೆಯೂ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ವಿಶ್ವಗುರು ಬಸವಣ್ಣ ಮತ್ತು ಡಾ.ಚನ್ನಬಸವ ಪಟ್ಟದ್ದೇವರು ಭಾವಚಿತ್ರದ ಮೆರವಣಿಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು. ೭.೩೦ಕ್ಕೆ ಜೆಎಂಎಫ್‌ಸಿ ನ್ಯಾಯಾಧೀಶ ದೇಶಭೂಷಣ ಕೌಜಲಗಿ ಷಟಸ್ಥಲ ಧ್ವಜರೋಹಣ ನೆರವೇರಿಸಿದರು.
ನಿಜಾಮ್ ಆಡಳಿತದಲ್ಲಿ ಶತಾಯುಷಿ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ದಿಟ್ಟತನ ಪ್ರದರ್ಶಿಸಿ ಕನ್ನಡ ಉಳಿಸಿ ಬೆಳೆಸುವುದರ ಜತೆಗೆ ಗಡಿಭಾಗವನ್ನು ಕನ್ನಡ ನೆಲದಲ್ಲಿ ಉಳಿಯುವಂತೆ ಮಾಡಿದರು. ಅನುಭವ ಮಂಟಪ ಮರು ನಿರ್ಮಿಸಿ ಬಸವಾದಿ ಶರಣರ ವಿಚಾರಧಾರೆಗಳನ್ನು ಜನರಿಗೆ ತಲುಪಿಸಿದರು. ಪೂಜ್ಯರ ಕೊಡುಗೆಯನ್ನು ವಿದ್ಯಾರ್ಥಿಗಳಿಗೆ ತಿಳಿಹೇಳುವ ಸದಾಶಯದೊಂದಿಗೆ ಬಸವಾದಿ ಶರಣರು ಮತ್ತು ಡಾ.ಚನ್ನಬಸವ ಪಟ್ಟದ್ದೇವರು ಜೀವನ ಸಾಧನೆ ಕುರಿತು ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ.
| ಶ್ರೀ ಗುರುಬಸವ ಪಟ್ಟದ್ದೇವರುಪೀಠಾಧಿಪತಿ, ಹಿರೇಮಠ ಸಂಸ್ಥಾನ ಭಾಲ್ಕಿ