ಬೀದರ್: ಚಿಟಗುಪ್ಪ ತಾಲೂಕಿನ ಕರಕನಳ್ಳಿ ಗ್ರಾಮದ ಶ್ರೀ ಬಕ್ಕಪ್ರಭು ದೇವಸ್ಥಾನಕ್ಕೆ ಭಕ್ತರು ಅಪಾರ ಭಕ್ತಿ, ಶ್ರದ್ಧೆ ಮತ್ತು ಧಾರ್ಮಿಕ ನಂಬಿಕೆಯಿಂದ ಅರ್ಪಿಸುವ ಗೋವುಗಳು ಹಾಗೂ ಕರುಗಳು ಕಸಾಯಿಖಾನೆಗಳಿಗೆ ಸಾಗಿಸಲಾಗುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಆಗ್ರಹಿಸಿದೆ.
ಭಕ್ತರು ದೇವಸ್ಥಾನಕ್ಕೆ ಗೋವುಗಳನ್ನು ಅರ್ಪಿಸುವುದು ಅವರ ಧಾರ್ಮಿಕ ನಂಬಿಕೆ, ಭಕ್ತಿ ಮತ್ತು ಗೋಮಾತೆಯ ಮೇಲಿನ ಗೌರವದ ಪ್ರತೀಕವಾಗಿದೆ. ಭಕ್ತರು ಪವಿತ್ರ ಭಾವನೆಯಿಂದ ಅರ್ಪಿಸಿದ ಗೋವುಗಳೇ ಅಕ್ರಮವಾಗಿ ಮಾರಾಟವಾಗಿ ಕಸಾಯಿಖಾನೆಗಳಿಗೆ ತಲುಪುತ್ತಿವೆ ಎಂಬ ಆರೋಪ ಗಂಭೀರ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂಥದ್ದಾಗಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಂಶ ಜನರ ಮುಂದಿಡಬೇಕು. ಇಲ್ಲಿ ತಪ್ಪು, ಅಕ್ರಮ ನಡೆದಿದ್ದಲ್ಲಿ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಇಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ಬಜರಂಗ ದಳ ಜಿಲ್ಲಾ ಸಂಚಾಲಕ ಭೀಮಣ್ಣ ಸೊರಳ್ಳಿ ಒತ್ತಾಯಿಸಿದ್ದಾರೆ.
ದೇವರ ಹೆಸರಿನಲ್ಲಿ ಭಕ್ತರ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ಸಮಾಜದಲ್ಲಿ ಕ್ಷಮೆಯಿಲ್ಲ. ದೇವಸ್ಥಾನದ ಪವಿತ್ರತೆಯನ್ನು ಹಣದ ಆಸೆಗೆ ಬಲಿಕೊಡುವ ಯಾವುದೇ ವ್ಯಕ್ತಿಯನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕರಕನಳ್ಳಿ ಬಕ್ಕಪ್ರಭು ದೇವಸ್ಥಾನಕ್ಕೆ ಕಳೆದ ಎಷ್ಟು ವರ್ಷಗಳಿಂದ ಭಕ್ತರು ಎಷ್ಟು ಗೋವುಗಳು ಮತ್ತು ಕರುಗಳನ್ನು ಅರ್ಪಿಸಿದ್ದಾರೆ? ಎಷ್ಟು ಗೋವುಗಳು ಪ್ರಸ್ತುತ ದೇವಸ್ಥಾನದಲ್ಲಿವೆ? ಎಷ್ಟು ಗೋವುಗಳು ಮೃತಪಟ್ಟಿವೆ? ಎಷ್ಟು ಗೋವುಗಳನ್ನು ಇತರರಿಗೆ ಹಸ್ತಾಂತರಿಸಲಾಗಿದೆ? ಎಷ್ಟು ಗೋವುಗಳನ್ನು ಮಾರಾಟ ಮಾಡಲಾಗಿದೆ? ಅವುಗಳಲ್ಲಿ ನಿಜವಾಗಿಯೂ ಎಷ್ಟು ಗೋವುಗಳು ಕಸಾಯಿಖಾನೆಗೆ ಸಾಗಿಸಲ್ಪಟ್ಟಿವೆ? ಈ ಎಲ್ಲಾ ಪ್ರಶ್ನೆಗಳಿಗೆ ಸಂಬಂಧಪಟ್ಟ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಬೇಕು ಎಂದು ಹೇಳಿದ್ದಾರೆ.
ಇಲ್ಲಿನ ಗೋವು ಕಸಾಯಿಖಾನೆಗೆ ಹೋಗಿದ್ದೇ ಆದಲ್ಲಿ ಇದರಲ್ಲಿ ಶಾಮೀಲಾದವರ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು. ದೇವಸ್ಥಾನಕ್ಕೆ ಅರ್ಪಿಸಲಾದ ಗೋವುಗಳ ರಕ್ಷಣೆಗೆ ಶಾಶ್ವತ ಗೋಶಾಲೆ ಮತ್ತು ಸೂಕ್ತ ನಿರ್ವಹಣಾ ವ್ಯವಸ್ಥೆ ಕಲ್ಪಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು. ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯಬಾರದು. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.