ಔರಾದ: ಔರಾದ ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಈ ಎರಡೂ ತಾಲ್ಲೂಕುಗಳನ್ನು ಕೂಡಲೇ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕೆಂದು ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ. ಚವ್ಹಾಣ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಪತ್ರ ಬರೆದಿರುವ ಅವರು, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಪ್ರಮಾಣದ ಮಳೆಯಾಗಿದ್ದು, ಬಿತ್ತನೆಯಾದ ಬಹುತೇಕ ಎಲ್ಲ ಬೆಳೆಗಳು ಸೊರಗಿ ನಿಂತಿವೆ. ಬೆಳೆಗಳ ಇಳುವರಿ ಸಿಗುವ ಲಕ್ಷಣಗಳು ಕಾಣುತ್ತಿಲ್ಲ ಎಂದು ತಿಳಿಸಿದ್ದಾರೆ.
ಜೂನ್ ತಿಂಗಳಲ್ಲಿ ತಡವಾಗಿ ಬಿತ್ತನೆ ನಡೆಸಿದ್ದ ರೈತರು ನಂತರ ಸುರಿದ ಅಲ್ಪ ಪ್ರಮಾಣದ ಮಳೆಯನ್ನು ನಂಬಿ ಸೋಯಾಬೀನ್, ಉದ್ದು, ಹೆಸರು, ಜೋಳ, ತೊಗರಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಆದರೆ ಕಳೆದೊಂದು ತಿಂಗಳಿನಿಂದ ಸಮರ್ಪಕ ಮಳೆಯಾಗದ ಕಾರಣ ಬಹುತೇಕ ಎಲ್ಲ ಬೆಳೆಗಳು ಒಣಗಿ ಸೊರಗಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಳೆ ಕೊರತೆಯಿಂದ ಬೆಳೆಗಳ ಬೆಳವಣಿಗೆ ಸಂಪೂರ್ಣ ಕುಂಠಿತಗೊಂಡಿದ್ದು, ಅನೇಕ ರೈತರು ಮರುಬಿತ್ತನೆ ಮಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈಗಾಗಲೇ ಸಾಲ ಮಾಡಿ ಕೃಷಿ ನಡೆಸಿರುವ ರೈತರಿಗೆ ಇದು ಮತ್ತಷ್ಟು ಆರ್ಥಿಕ ಹೊರೆ ಉಂಟುಮಾಡಿದ್ದು, ಸರ್ಕಾರ ತಕ್ಷಣ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ತಕ್ಷಣವೇ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿ, ಜೊತೆಗೆ ಬೆಳೆ ಹಾನಿ ಪರಿಹಾರ, ಬೆಳೆ ವಿಮೆ ಸೌಲಭ್ಯ, ಮರುಬಿತ್ತನೆಗೆ ವಿಶೇಷ ಪ್ಯಾಕೇಜ್, ಕೃಷಿ ಇನ್‌ಪುಟ್ ಸಹಾಯಧನ ಸೇರಿದಂತೆ ಸರ್ಕಾರದಿಂದ ದೊರೆಯುವ ಎಲ್ಲಾ ರೀತಿಯ ನೆರವುಗಳನ್ನು ತುರ್ತಾಗಿ ಜಾರಿಗೊಳಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕೆಂದು ಶಾಸಕರು ಮನವಿ ಮಾಡಿದ್ದಾರೆ.