ಹುಮನಾಬಾದ್: ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಎಸ್ಕೆ) ಪುನಶ್ಚೇತನಗೊಳಿಸುವಂತೆ ಅಥವಾ ಎಲ್ಆರ್ಒಟಿ (ಔ್ಕಣಖ) ಆಧಾರದ ಮೇಲೆ ಗುತ್ತಿಗೆ ನೀಡುವಂತೆ ಒತ್ತಾಯಿಸಿ ಮಾಜಿ ಸಚಿವ ರಾಜಶೇಖರ ಪಾಟೀಲ್ ನೇತೃತ್ವದ ರೈತರ ನಿಯೋಗ ಬುಧವಾರ ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ವಿಧಾನಮಂಡಲದ ವಿಶೇಷ ಅಧಿವೇಶನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ನಿಯೋಗ, ಬಿಎಸ್ಎಸ್ಕೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಮೂಲಕ ಜಿಲ್ಲೆಯ ಕಬ್ಬು ಬೆಳೆಗಾರರು, ಕಾರ್ಮಿಕರು ಹಾಗೂ ಕಾರ್ಖಾನೆಯನ್ನೇ ಅವಲಂಬಿಸಿರುವ ಕುಟುಂಬಗಳ ಹಿತ ಕಾಪಾಡಬೇಕು ಎಂದು ಮನವಿ ಮಾಡಿತು.
ಕಾರ್ಖಾನೆಯ ಮೇಲಿರುವ ಅಪೆಕ್ಸ್ ಬ್ಯಾಂಕ್, ಬೀದರ್ ಡಿಸಿಸಿ ಬ್ಯಾಂಕ್ ಹಾಗೂ ಎಸ್ಬಿಐ ಬ್ಯಾಂಕ್ಗಳ ಬಡ್ಡಿ ಮೊತ್ತವನ್ನು ಮನ್ನಾ ಮಾಡಿದರೆ ಬಿಡ್ದಾರರು ಮುಂದೆ ಬಂದು ಎಲ್ಆರ್ಒಟಿ ಆಧಾರದ ಮೇಲೆ ಕಾರ್ಖಾನೆಯನ್ನು ಗುತ್ತಿಗೆ ಪಡೆದು ಮರು ಆರಂಭಿಸಲು ಸಾಧ್ಯವಾಗಲಿದೆ ಎಂದು ನಿಯೋಗ ಮುಖ್ಯಮಂತ್ರಿಗಳ ಗಮನಕ್ಕೆ ತಂದಿತು.
ರೈತರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಬಂಧಿಸಿದ ಎಲ್ಲ ಬ್ಯಾಂಕ್ಗಳ ಅಧಿಕಾರಿಗಳನ್ನು ಕರೆದು ಸಮಾಲೋಚನೆ ನಡೆಸಿ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಎಂದು ನಿಯೋಗ ತಿಳಿಸಿದೆ. ಇದಕ್ಕೂ ಮೊದಲು ನಿಯೋಗವು ಸಹಕಾರ ಸಚಿವ ಲಕ್ಷ$್ಮಣ ಸವದಿ ಅವರನ್ನು ಭೇಟಿ ಮಾಡಿ ಬಿಎಸ್ಎಸ್ಕೆ ಮೇಲಿನ ಹರಾಜು ಪ್ರಕ್ರಿಯೆ ರದ್ದುಪಡಿಸಿ, ಎಲ್ಆರ್ಒಟಿ ಆಧಾರದ ಮೇಲೆ ಕಾರ್ಖಾನೆ ಮರು ಆರಂಭಿಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿತ್ತು.
ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಬ್ದುಲ್ ಮನ್ನಾನ್ ಶೇಠ್, ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ, ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಮಂತರಾವ ಬಿರಾದಾರ, ರೈತ ಸಂಘದ ಗೌರವಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ, ಬಿಎಸ್ಎಸ್ಕೆ ಕಾರ್ಮಿಕರಾದ ರಾಜಶೇಖರ ಹಂದ್ರಾಳೆ, ಅರ್ಜುನ್ ತಮಗಿಕರ್, ಗುರುಲಿಂಗಯ್ಯ ಹಾಲಾ, ಝರ್ನಾರಡ್ಡಿ, ರಾಜು ಪಾಟೀಲ್, ಮಲ್ಲಿಕಾರ್ಜುನ ಭಂಡಾರಿ, ಶಿವಕುಮಾರ ಚಳಕಾಪೂರೆ, ಝರನು ಕಾವಲೆ, ಜಾನ್ಸನ್ ಇತರರಿದ್ದರು.