ಬೀದರ್: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ನ. 21 ಹಾಗೂ 22 ರಂದು 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.
ಸಾಹಿತಿ ಡಾ. ಬಸವರಾಜ ಬಲ್ಲೂರ ಸರ್ವಾಧ್ಯಕ್ಷತೆಯ ಸಮ್ಮೇಳನಕ್ಕೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಾದ್ಯಂತ ಸಮ್ಮೇಳನದ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. ಪರಿಷತ್ತಿನ 14 ಸಾವಿರ ಸದಸ್ಯರು ಹಾಗೂ ಕನ್ನಡಾಭಿಮಾನಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ಹೇಳಿದರು.
ರಂಗ ಮಂದಿರದಲ್ಲಿ ವಿವಿಧ ಮಳಿಗೆಗಳು, ಪ್ರದರ್ಶನಗಳು ಇರಲಿವೆ. ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಎರಡು ದಿನ ಸ್ವಾದಿಷ್ಟ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
21 ರಂದು ಬೆಳಿಗ್ಗೆ 8.30ಕ್ಕೆ ನಗರದ ಮನ್ನಳ್ಳಿ ರಸ್ತೆಯಲ್ಲಿ ಇರುವ ಕರ್ನಾಟಕ ಪದವಿಪೂರ್ವ ಕಾಲೇಜಿನಿಂದ ರಂಗ ಮಂದಿರದವರೆಗೆ ಅಲಂಕೃತ ಸಾರೋಟಿನಲ್ಲಿ ಕನ್ನಡ ತಾಯಿ ಭುವನೇಶ್ವರಿ, ಸಮ್ಮೇಳನ ಸರ್ವಾಧ್ಯಕ್ಷ ಡಾ. ಬಸವರಾಜ ಬಲ್ಲೂರ, ಈವರೆಗಿನ ಸಮ್ಮೇಳನಗಳ ಸರ್ವಾಧ್ಯಕ್ಷರು, ಈವರೆಗಿನ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ, ತಾಲ್ಲೂಕು ಅಧ್ಯಕ್ಷರ ಮೆರವಣಿಗೆ ಜರುಗಲಿದೆ ಎಂದು ತಿಳಿಸಿದರು.
ಶಾಸಕ ರಹೀಂಖಾನ್ ಮೆರವಣಿಗೆಗೆ ಚಾಲನೆ ನೀಡಲಿದ್ದು, ಕೆಆರ್ಇ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಅಂದು ಬೆಳಿಗ್ಗೆ 11.30ಕ್ಕೆ ರಂಗ ಮಂದಿರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪತ್ರಕರ್ತ ದಿನೇಶ ಅಮೀನ ಮಟ್ಟು ಸಮ್ಮೇಳನವನ್ನು ಉದ್ಘಾಟಿಸುವರು. ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಸಾನಿಧ್ಯ, ಹುಲಸೂರಿನ ಶಿವಾನಂದ ಸ್ವಾಮೀಜಿ ನೇತೃತ್ವ, ಮಲ್ಲಯ್ಯಗಿರಿ ಆಶ್ರಮದ ಡಾ. ಬಸವಲಿಂಗ ಅವಧೂತರು ನೇತೃತ್ವ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಸಮ್ಮೇಳನ ಸರ್ವಾಧ್ಯಕ್ಷ ಡಾ. ಬಸವರಾಜ ಬಲ್ಲೂರ ಸರ್ವಾಧ್ಯಕ್ಷರ ನುಡಿ ಆಡುವರು. ಶ್ರೀ ಸಂತ ಸೇವಾಲಾಲಾಲ್ ಮಹಾರಾಜರ ಜನ್ಮಸ್ಥಾನ ಮಹಾ ಮಠ ಸಮಿತಿಯ ನೂತನ ಅಧ್ಯಕ್ಷ, ಔರಾದ್ ಶಾಸಕ ಅಧ್ಯಕ್ಷ ಪ್ರಭು ಚವಾಣ್ ಅವರನ್ನು ಸನ್ಮಾನಿಸಲಾಗುವುದು. ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು ಎಂದು ಹೇಳಿದರು.
ಶಾಸಕ ಶರಣು ಸಲಗರ ಪುಸ್ತಕ ಮಳಿಗೆ ಉದ್ಘಾಟಿಸುವರು. ಶಾಸಕ ಸಿದ್ಧಲಿಂಗಪ್ಪ ಪಾಟೀಲ ಉದ್ಯಮ ಮಳಿಗೆ ಹಾಗೂ ಎನ್.ಎಸ್.ಎಸ್.ಕೆ. ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಚಿತ್ರಕಲಾ ಮಳಿಗೆ ಉದ್ಘಾಟಿಸುವರು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸುರೇಶ ಚನಶೆಟ್ಟಿ ಆಶಯ ನುಡಿ ಆಡುವರು. ಗಣ್ಯರು ಪಾಲ್ಗೊಳ್ಳುವರು ಎಂದು ಹೇಳಿದರು.
ಅಂದು ಮಧ್ಯಾಹ್ನ 3ಕ್ಕೆ ಭೂಮಿ ತತ್ವ ಪ್ರಥಮ ಗೋಷ್ಠಿ, ಸಂಜೆ 5ಕ್ಕೆ ಬೆಳೆವ ಸಿರಿ(ಮಕ್ಕಳ ಮಾತು) ದ್ವಿತೀಯ ಗೋಷ್ಠಿ, ಸಂಜೆ 6.30ಕ್ಕೆ ಕಾವ್ಯ, ಕುಂಚ, ಗೀತ ಗಾಯನ ಹಾಗೂ ನರ್ತನ ನಡೆಯಲಿದೆ ಎಂದು ತಿಳಿಸಿದರು.
22 ರಂದು ಬೆಳಿಗ್ಗೆ 9.30ಕ್ಕೆ ಸಂಸ್ಕೃತಿ ಸುದಿನ ಶೀರ್ಷಿಕೆಯಡಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಸೌರಭ, ಬೆಳಿಗ್ಗೆ 11ಕ್ಕೆ ಕವಿ ಮೇಳ, ಮಧ್ಯಾಹ್ನ 1.30ಕ್ಕೆ ಸಮ್ಮೇಳನ ಸರ್ವಾಧ್ಯಕ್ಷರೊಂದಿಗೆ ಮಾತುಕತೆ, ಮಧ್ಯಾಹ್ನ 2.30ಕ್ಕೆ ಬಹುತ್ವದ ಅರಿವು ನಾಲ್ಕನೇ ಗೋಷ್ಠಿ, ಸಂಜೆ 4ಕ್ಕೆ ಕೃತಕ ಬುದ್ಧಿಮತ್ತೆ, ಸೃಜನಶೀಲ ಸಾಹಿತ್ಯದ ಸವಾಲುಗಳು ಐದನೇ ಗೋಷ್ಠಿ, ಸಂಜೆ 4.45ಕ್ಕೆ ಮಹಿಳಾ ಅಸ್ಮಿತೆ ಆರನೇ ಗೋಷ್ಠಿ, ಸಂಜೆ 6.30ಕ್ಕೆ ಬಹಿರಂಗ ಅಧಿವೇಶನ ಜರುಗಲಿದೆ ಎಂದು ತಿಳಿಸಿದರು.
ಸಂಜೆ 6.45ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಸಾನಿಧ್ಯ, ಜಗದ್ಗುರು ಶಿವಯೋಗೀಶ್ವರ ಸ್ವಾಮೀಜಿ ನೇತೃತ್ವ, ಕಸಾಪ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅಧ್ಯಕ್ಷತೆ ವಹಿಸುವರು.
ಸಾಹಿತಿ ಡಾ. ಬಿ.ಬಿ. ಪೂಜಾರ ಸಮಾರೋಪ ನುಡಿ, ಡಾ. ಬಸವರಾಜ ಬಲ್ಲೂರ ಸಮ್ಮೇಳನ ಸರ್ವಾಧ್ಯಕ್ಷರ ನುಡಿ ಆಡುವರು ಎಂದು ಹೇಳಿದರು.
ಸಂಸದ ಸಾಗರ್ ಖಂಡ್ರೆ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಭೀಮರಾವ್ ಪಾಟೀಲ, ಮೀನುಗಾರಿಕೆ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಹಾಗೂ ಇತರ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
ಬಿಡಿಎ ಮಾಜಿ ಅಧ್ಯಕ್ಷ ಬಾಬುವಾಲಿ, ಪ್ರಮುಖರಾದ ಜೈರಾಜ್ ಖಂಡ್ರೆ, ಹಾವಶೆಟ್ಟಿ ಪಾಟೀಲ, ಕಸಾಪ ಜಿಲ್ಲಾ ಘಟಕದ ಹಿರಿಯ ಉಪಾಧ್ಯಕ್ಷ ಬಾಬುರಾವ್ ದಾನಿ, ಗೌರವ ಕಾರ್ಯದರ್ಶಿ ಶಿವಶಂಕರ ಟೋಕರೆ, ಬೀದರ್ ತಾಲ್ಲೂಕು ಅಧ್ಯಕ್ಷ ಟಿ.ಎಂ. ಮಚ್ಚೆ, ಮೆರವಣಿಗೆ ಸಮಿತಿ ಅಧ್ಯಕ್ಷ ರಾಜೇಂದ್ರ ಮಣಗೀರೆ, ಪ್ರಮುಖರಾದ ಉಮೇಶ ಜಾಬಾ, ದೇವೇಂದ್ರ ಕರಂಜೆ, ಸಿದ್ಧಾರೂಢ ಭಾಲ್ಕೆ, ರತ್ನಾ ಪಾಟೀಲ, ರೂಪಾ ಪಾಟೀಲ, ಸಂಜು ಅಲ್ಲೂರೆ, ಶಿವಕುಮಾರ ರತ್ನಾಪುರ ಇದ್ದರು.
ಚನಶೆಟ್ಟಿ ಅವಧಿಯಲ್ಲಿ ಹೆಚ್ಚು ಕನ್ನಡ ಪರ ಚಟುವಟಿಕೆ
ಕಸಾಪ ಜಿಲ್ಲಾ ಅಧ್ಯಕ್ಷ ಸುರೇಶ ಚನಶೆಟ್ಟಿ ಅವರ ಹತ್ತು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸಮ್ಮೇಳನಗಳು ಹಾಗೂ ಕನ್ನಡ ಪರ ಚಟುವಟಿಕೆಗಳು ನಡೆದಿವೆ. ಪರಿಷತ್ ಅನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನೇಕ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದರು. ಪರಿಷತ್ ಅವಧಿಯ ಮಕ್ತಾಯದ ಹಂತದಲ್ಲೂ ಚಟುವಟಿಕೆಗಳನ್ನು ಮುಂದುವರಿಸಿದ್ದಾರೆ. ಅವರ ಮುಂದಿನ ಪಯಣದ ಹಾದಿಯೂ ಸುಗಮವಾಗಲಿದೆ. ಮುಂದೆಯೂ ಅವರಿಗೆ ಸಹಕಾರ ಇರಲಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಕನ್ನಡದ ಬೆಳವಣಿಗೆಗೆ ಹಗಲಿರುಳು ಶ್ರಮಿಸಿದ್ದೇನೆ. ಬರುವ ದಿನಗಳಲ್ಲೂ ಕನ್ನಡ ಸೇವೆ ನಿರಂತರ ಮುಂದುವರಿಸುವೆ ಎಂದು ಸುರೇಶ ಚನಶೆಟ್ಟಿ ಹೇಳಿದರು.
ಸಮ್ಮೇಳನ ಸರ್ವಾಧ್ಯಕ್ಷರಿಗೆ ಆಹ್ವಾನ
ಬೀದರ್: ಔರಾದ್ ತಾಲ್ಲೂಕಿನ ಬಲ್ಲೂರ(ಜೆ) ಗ್ರಾಮದಲ್ಲಿ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಬಸವರಾಜ ಬಲ್ಲೂರ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಗುರುವಾರ ಸಮ್ಮೇಳನಕ್ಕೆ ಅಧಿಕೃತ ಆಹ್ವಾನ ನೀಡಲಾಯಿತು. ಪರಿಷತ್ ಜಿಲ್ಲಾ ಅಧ್ಯಕ್ಷ ಸುರೇಶ ಚನಶೆಟ್ಟಿ ಅವರು ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಫಲ ಪುಷ್ಪ ನೀಡಿ ಆಹ್ವಾನಿಸಿದರು. ಪರಿಷತ್ ಪದಾಧಿಕಾರಿಗಳಾದ ಶಿವಶಂಕರ ಟೋಕರೆ, ಟಿ.ಎಂ. ಮಚ್ಚೆ, ಸಿದ್ಧಾರೆಡ್ಡಿ ನಾಗೋರಾ, ಬಾಬುರಾವ್ ದಾನಿ, ದೇವೇಂದ್ರ ಕರಂಜೆ, ಸಂಗಮೇಶ ಜ್ಯಾಂತೆ, ಸಿದ್ಧಾರೂಢ ಭಾಲ್ಕೆ, ಉಮೇಶ ಜಾಬಾ, ಸಂಜು ಅಲ್ಲೂರೆ, ಸುನೀಲ್ ಮೂಲಗೆ, ಶಿವಕುಮಾರ ರತ್ನಾಪುರ, ಶಿವರಾಜ ಪಾಟೀಲ, ಸಕಲೇಶ್ವರಿ ಚನಶೆಟ್ಟಿ, ರತ್ನಾ ಪಾಟೀಲ, ರೂಪಾ ಪಾಟೀಲ, ಮಹಾನಂದಾ ಪಾಟೀಲ, ಗಂಗಶೆಟ್ಟಿ ಪಾಟೀಲ, ಶಿವಶಂಕರ ತರನಳ್ಳೆ ಕೌಡಗಾಂವ್ ಮತ್ತಿತರರು ಇದ್ದರು.