ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಮಠದಲ್ಲಿ ಸೋಮವಾರ ನಡೆದ ಸಹಸ್ರ ಚಂದ್ರ ದರ್ಶನ ಕಾರ್ಯಕ್ರಮವನ್ನು ಶ್ರೀ ಡಾ. ಚನ್ನವಿರ ಶಿವಾಚಾರ್ಯರು ಉದ್ಘಾಟಿಸಿದರು. ಬಿ.ಕೆ. ಹಿರೇಮಠ, ಮಲ್ಲಿನಾಥ ಹಿರೇಮಠ, ಪ್ರಮೀಳಾ ಬಲರಾಮ್​ ಗುಪ್ತಾ, ಮಂಜುಳಾ ಶಿವಾನಂದ, ಅನಿತಾ ನವಣಿ, ಶ್ರೀದೇವಿ ಹಿರೇಮಠ, ಹೇಮಲತಾ ಹಿರೇಮಠ ಉಪಸ್ಥಿತರಿದ್ದರು. 
ಬೀದರ್

ತಾಯಿ ಜಗತ್ತಿನ ಶ್ರೇಷ್ಠ ಕಲಾವಿದೆ

ಬಸವಕಲ್ಯಾಣ: ವಾತ್ಸಲ್ಯದ ಖಜಾನೆಯಾಗಿರುವ ತಾಯಿ ತನ್ನ ಮಕ್ಕಳಿಗೆ ಸಂಸ್ಕಾರ, ಸದಾಚಾರಗಳನ್ನು ಧಾರೆಯರೆಯುತ್ತಾ, ಕುಟುಂಬ ಹಾಗೂ ಸಮಾಜದಲ್ಲಿ ಸಾಂಸ್ಕೃತಿಕ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿಯೂ ಹೊತ್ತಿರುತ್ತಾಳೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ. ಚನ್ನವಿರ ಶಿವಾಚಾರ್ಯರು ಹೇಳಿದರು.

ಹಾರಕೂಡ ಶ್ರೀಮಠದಲ್ಲಿ ಸೋಮವಾರ ಆಯೋಜಿಸಿದ್ದ ಸಹಸ್ರ ಚಂದ್ರ ದರ್ಶನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಗುರುವಂದನೆ ಸ್ವೀಕರಿಸಿ ಮಾತನಾಡಿದ ಶ್ರೀಗಳು, ತನ್ನಲ್ಲಿಯ ವಿಶಿಷ್ಟ ಕೌಶಲದಿಂದ ಮನೆಯ ಬಾಹ್ಯ ಮತ್ತು ಆಂತರಿಕ ಸೌಂದರ್ಯವನ್ನು ಕಾಪಾಡುತ್ತ ಜಗತ್ತಿನ ಉಳಿವು ಮತ್ತು ಮುನ್ನಡೆಗೆ ಕಾರಣವಾದ ತಾಯಿ ವಿಶ್ವ ಕಲಾವಿದೆಯಾಗಿ ಕಾಣುತ್ತಾಳೆ ಎಂದರು.

ತ್ಯಾಗ, ಸೇವೆ, ಪ್ರೀತಿಯ ಪ್ರತಿಕವಾಗಿರುವ ತಾಯಿಗೆ ಹೋಲಿಕೆಯಾಗುವ ಇನ್ನೊಂದು ಜೀವ ಈ ಜಗತ್ತಿನಲ್ಲಿ ಸಿಗುವುದಿಲ್ಲ. ಪ್ರತಿಯೊಬ್ಬರೂ ತಮ್ಮ ತಂದೆ-ತಾಯಿ, ಗುರು-ಹಿರಿಯರನ್ನು ದೇವರ ಸ್ಥಾನದಲ್ಲಿ ಕಂಡು ನಿಷ್ಠೆಯಿಂದ ಸೇವೆ ಮಾಡಿದರೆ ಅದುವೇ ನಿತ್ಯ ಮಂಗಳ ಹೋಮವಾಗುತ್ತದೆ ಎಂದು ಹೇಳಿದರು.

ಕಲಬುರ್ಗಿಯ ಪ್ರಮೀಳಾ ಬಲರಾಮ್​ ಗುಪ್ತಾ ತಮ್ಮ ಬದುಕಿನ ಸಹಸ್ರಚಂದ್ರ ದರ್ಶನದ ಶಾಂತಿ ಫಲವಾಗಿ ಶ್ರೀಗಳಿಂದ ಆಶೀರ್ವಾದ ಪಡೆದರು. ಮಂಜುಳಾ ಶಿವಾನಂದ ಹಾಗೂ ಅನಿತಾ ನವಣಿ ಮಾತನಾಡಿದರು. ಜಿಪಂ ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ. ಹಿರೇಮಠ, ಮಲ್ಲಿನಾಥ ಹಿರೇಮಠ, ಶ್ರೀದೇವಿ ಹಿರೇಮಠ, ಹೇಮಲತಾ ಹಿರೇಮಠ ಇದ್ದರು. ಸಾವಿತ್ರಿ ಬಿರಾದಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನವಲಿಂಗ ಪಾಟೀಲ ಮನ್ನಾಖೇಳಿ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನೆ ಗೀತೆ ಹಾಡಿದರು.