ರೇವಣಸಿದ್ದಪ್ಪ ಜಲಾದೆ 
ಬೀದರ್

ಶಿಕ್ಷಕರು, ಪದವೀಧರರಿಂದ ಸರ್ಕಾರಕ್ಕೆ ತಕ್ಕ ಪಾಠ

ರೇವಣಸಿದ್ದಪ್ಪ ಜಲಾದೆ ಹೇಳಿಕೆ

ಬೀದರ್: ವಿಧಾನ ಪರಿಷತ್‍ನ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶಿಕ್ಷಕರು ಹಾಗೂ ಪದವೀಧರರು ಆಡಳಿತಾರೂಢ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸಂಘದ ರಾಜ್ಯ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಪ್ರತಿಕ್ರಿಯಿಸಿದ್ದಾರೆ.
ಸರ್ಕಾರ ಶಿಕ್ಷಣ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಬೇಡಿಕೆಗಳನ್ನು ಕಡೆಗಣಿಸಿದ್ದೇ ಚುನಾವಣೆಯ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.
ಖಾಸಗಿ ಶಿಕ್ಷಣ ಸಂಸ್ಥೆಯವರು ವಿವಿಧ ಬೇಡಿಕೆಗಾಗಿ ಅನೇಕ ಬಾರಿ ಹೋರಾಟ ನಡೆಸಿದರೂ ಸರ್ಕಾರ ಸ್ಪಂದಿಸಲಿಲ್ಲ. ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲಿ ಧರಣಿ ನಡೆಸಿದಾಗ, ಅನುದಾನ ಕಲ್ಪಿಸುವ ಭರವಸೆ ಕೊಟ್ಟಿತ್ತು. ಆದರೆ, ನುಡಿದಂತೆ ನಡೆದುಕೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ.
ನೂರೆಂಟು ಷರತ್ತುಗಳನ್ನು ಹಾಕಿ, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳನ್ನು ಸಂಕಷ್ಟಕ್ಕೆ ದೂಡಿತ್ತು. ಹೀಗಾಗಿ ಸಹಜವಾಗಿಯೇ ಸರ್ಕಾರದ ವಿರುದ್ಧ ಶಿಕ್ಷಕರಲ್ಲಿ ತೀವ್ರ ಅಸಮಾಧಾನ ಇತ್ತು ಎಂದು ತಿಳಿಸಿದ್ದಾರೆ.
ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು, 1995 ರ ನಂತರ ಆರಂಭವಾದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಇತರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಗಳಲ್ಲೂ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.