ಜಿಲ್ಲೆ

ಉಕ್ರೇನ್​​ನಲ್ಲಿ ಬೀದರ್​​ನ ಯುವಕ ಸಾವು; ಮೃತದೇಹ ತರಿಸಿಕೊಡಿ ಎಂದು ಗೋಳಿಡುತ್ತಿರುವ ಪಾಲಕರು

lakshmihegde

ಬೀದರ್: ಇಲ್ಲಿನ ವಿದ್ಯಾರ್ಥಿಯೋರ್ವ ಉಕ್ರೇನ್​​ನಲ್ಲಿ ಮೃತಪಟ್ಟಿದ್ದು, ನಾಲ್ಕು ದಿನಗಳಾದರೂ ಸರಿಯಾದ ಮಾಹಿತಿ ಸಿಗದೆ ಪಾಲಕರು ಗೋಳಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಬಳಿ ನೆರವಿಗಾಗಿ ಮೊರೆಯಿಟ್ಟಿದ್ದಾರೆ.

ಭಾಲ್ಕಿಯ ಕದಲಾಬಾದ್​ ಗ್ರಾಮದ ಅಮರ್​​ (20) ಉಕ್ರೇನ್​​​ನಲ್ಲಿ ಎಂಬಿಬಿಎಸ್​ ಓದುತ್ತಿದ್ದ. ಈತ ನಾಲ್ಕು ದಿನಗಳ ಹಿಂದೆಯೇ ಕಟ್ಟಡದ ಮೇಲಿನಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಸುದ್ದಿ ಬಂದಿದೆ. ಆದರೆ ನಿಖರವಾಗಿ ಮಾಹಿತಿ ಸಿಗುತ್ತಿಲ್ಲ.

ಅಮರ್​ ಒಂದು ವರ್ಷದ ಹಿಂದಷ್ಟೇ ಉಕ್ರೇನ್​​ಗೆ ತೆರಳಿದ್ದ. ಅಲ್ಲಿನ ಖಾರಖವಿ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ. ಅವನ ಸಾವು ಹೇಗಾಯಿತು? ಯಾವ ಕಟ್ಟಡದಿಂದ ಬಿದ್ದಿದ್ದಾನೆ? ಮೃತದೇಹ ಏನಾಯಿತು ಎಂಬಿತ್ಯಾದಿ ವಿಷಯಗಳನ್ನು ತಿಳಿಯಲು ಪಾಲಕರು ಚಡಪಡಿಸುತ್ತಿದ್ದಾರೆ.

ನಮಗೆ ನಮ್ಮ ಪುತ್ರನ ಸಾವಿನ ಬಗ್ಗೆ ತಿಳಿಯಬೇಕು. ಮೃತದೇಹವನ್ನು ಇಲ್ಲಿಗೆ ತರಿಸಿಕೊಡಬೇಕು. ಮುಖ್ಯಮಂತ್ರಿ ಯಡಿಯೂರಪ್ಪನವರು ನೆರವಿಗೆ ಬರಬೇಕು ಎಂದು ಕಣ್ಣೀರು ಸುರಿಸುತ್ತಿದ್ದಾರೆ.